DAKSHINA KANNADA
ಯಕ್ಷರಂಗದ ಸಿಡಿಲಮರಿ ಡಾ. ಶ್ರೀಧರ್ ಭಂಡಾರಿ ಇನ್ನಿಲ್ಲ
ಪುತ್ತೂರು ಫೆಬ್ರವರಿ 19: ಯಕ್ಷಗಾನದ ಸಿಡಿಲಮರಿ ಖ್ಯಾತಿಯ ಖ್ಯಾತ ಪುಂಡುವೇಷಧಾರಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬನ್ನೂರು ಯಕ್ಷದೇಗುಲ ನಿವಾಸಿ ಡಾ. ಶ್ರೀಧರ್ ಭಂಡಾರಿ (73) ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ.
ಯಕ್ಷಗಾನ ಕಲಾ ಸಾಧಕ ಬನ್ನೂರು ದಿ.ಶೀನಪ್ಪ ಭಂಡಾರಿ ಮತ್ತು ಸುಂದರಿ ದಂಪತಿಯ ಪುತ್ರರಾಗಿರುವ ಶ್ರೀಧರ ಭಂಡಾರಿ ಅವರು ತನ್ನ 9ನೇ ವಯಸ್ಸಿನಲ್ಲೇ ಯಕ್ಷಗಾನ ಕಲಾ ಕ್ಷೇತ್ರದಲ್ಲಿ ಧ್ರುವ ನಕ್ಷತ್ರವಾಗಿ ಬೆಳಗಿ ಹೆಜ್ಜೆಗಾರಿಕೆ, ದಿಗಿಣ, ನಾಟ್ಯ, ಮಾತುಗಾರಿಕೆ, ಪಾತ್ರ ನಿರ್ವಹಣಾ ಶೈಲಿಗಳನ್ನು ಆಳವಾಗಿ ಅಭ್ಯಸಿಸಿ ಸವ್ಯಸಾಚಿಯಾಗಿ ಬೆಳೆದಿದ್ದಾರೆ.
ಧರ್ಮಸ್ಥಳ ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದ ಪುತ್ತೂರು ಶ್ರೀಧರ ಭಂಡಾರಿಯವರ ಅಭಿಮನ್ಯು ಪಾತ್ರ ಭಾರಿ ಪ್ರಸಿದ್ಧಿ ಪಡೆದಿತ್ತು. ರಂಗಸ್ಥಳದಲ್ಲಿ ಚುರುಕಿನ, ವೇಗದ ನಡೆಯಿಂದ ಅವರಿಗೆ ಸಿಡಿಲಮರಿ ಎಂಬ ಬಿರುದು ಒಲಿದಿತ್ತು. ಒಮ್ಮೆಗೆ 200ರಿಂದ 250ರಷ್ಟು ಧೀಂಗಿಣ ಹಾಕುತ್ತಿದ್ದ ಶ್ರೀಧರ ಭಂಡಾರಿ ಅವರು ಬಭ್ರುವಾಹನ, ಅಶ್ವತ್ಥಾಮ, ಕುಶ, ಭಾರ್ಗವ ಮುಂತಾದ ಪಾತ್ರಗಳಲ್ಲಿ ಸೈ ಎನಿಸಿದ್ದರು. ಹಲವಾರು ಮಂದಿಗೆ ಯಕ್ಷಗಾನ ಕಲಾ ಶಿಕ್ಷಣ ನೀಡಿದ್ದರು. ಮೃತರು ಪತ್ನಿ ಉಷಾ ಭಂಡಾರಿ, ಪುತ್ರಿಯರಾದ ಕೋಕಿಲ, ಶಾಂತಲಾ, ಡಾ. ಅನಿಲ, ಪುತ್ರ ದೇವಿ ಪ್ರಕಾಶ್, ಮೊಮ್ಮಕ್ಕಳನ್ನು ಅಗಲಿದ್ದಾರೆ.