LATEST NEWS
ಶಾಸಕ ಯುಟಿ ಖಾದರ್ ಸಹೋದರ ಇಫ್ತಿಕಾರ್ ನಿವಾಸದ ಮೇಲೆ ಐಟಿ ದಾಳಿ

ಮಂಗಳೂರು ಫೆಬ್ರವರಿ 18: ಮಂಗಳೂರಿನಲ್ಲಿ ಮತ್ತೆ ಐಟಿ ದಾಳಿ ಮುಂದುವರೆದಿದ್ದು, ಇಂದು ಶಾಸಕ ಯು.ಟಿ. ಖಾದರ್ ಸಹೋದರ ಇಫ್ತಿಕಾರ್ ಮನೆ ಮೇಲೆ ಐಟಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.
ನಗರದ ಲೈಟ್ ಹೌಸ್ ಹಿಲ್ ರೋಡ್ನಲ್ಲಿರುವ ಮೋತಿಶಾಮ್ ಅಕ್ರೋಪೊಲಿಸ್ ಬಿಲ್ಡಿಂಗ್ನ 8ನೇ ಮಹಡಿಯಲ್ಲಿನ ಇಫ್ತಿಕಾರ್ ಮನೆ ಮೇಲೆ ಐಟಿ ರೈಡ್ ನಡೆಸಿದೆ. ಮೂಲಗಳ ಪ್ರಕಾರ ಇಫ್ತಿಕಾರ್ ಮನೆಗೂ ಐಟಿ ಇಲಾಖೆ ನಿನ್ನೆಯೇ ದಾಳಿ ನಡೆಸಿದ್ದು, ರಾತ್ರಿ ಪೂರ್ತಿ ದಾಖಲೆಗಳನ್ನು ಪರಿಶೀಲನೆ ನಡೆಸಿದೆ. ಇಂದೂ ಕೂಡ ದಾಖಲೆಗಳ ಪರಿಶೀಲನೆ ಮುಂದುವರಿದಿದೆ ಎಂದು ತಿಳಿದು ಬಂದಿದೆ. ದಾಳಿ ವೇಳೆ ಇಫ್ತಿಕಾರ್ ಮನೆಯಲ್ಲಿದ್ದ ಇಬ್ಬರು ಸಂಬಂಧಿಕ ಮಹಿಳೆಯರು ಇದ್ದಿದ್ದು ಇಬ್ಬರು ಮಹಿಳೆಯರನ್ನು ಮನೆಯಿಂದ ಹೊರಗೆ ಕಳುಹಿಸಿ ಪರಿಶೀಲನೆ ನಡೆಸಿದ್ದಾರೆ.

ನಗರದ ಲೈಟ್ ಹೌಸ್ ಹಿಲ್ ರಸ್ತೆಯ ಮನೆಗೆ ಬಂದಿರುವ ಅಧಿಕಾರಿಗಳು ದಾಖಲೆಗಳನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ. ಐಟಿ ದಾಳಿಗೆ ಒಳಗಾಗಿರುವ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಿನ ಆಡಳಿತದಲ್ಲಿ ಡಾ.ಇಫ್ತಿಕಾರ ಪಾಲುದಾರಿಕೆ ಹೊಂದಿದ್ದಾರೆ ಎನ್ನಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಗುರುವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.