LATEST NEWS
ಕಂಚಿನ ಕಂಠದ ಯಕ್ಷಗಾನ ಕಲಾವಿದ ಪೆರುವಾಯಿ ನಾರಾಯಣ ಶೆಟ್ಟಿ ನಿಧನ

ಮಂಗಳೂರು ಜನವರಿ 24: ತಮ್ಮ ಕಂಚಿನ ಕಂಠ ಶ್ರುತಿ ಬದ್ದ ಮಾತುಗಳಿಂದ ಹೆಸರುವಾಸಿಯಾಗಿದ್ದ ಯಕ್ಷಗಾನ ಕಲಾವಿದ ಪೆರುವಾಯಿ ನಾರಾಯಣ ಶೆಟ್ಟಿ(82) ಅವರು ಮಂಗಳವಾರ ರಾತ್ರಿ ನಿಧನರಾಗಿದ್ದಾರೆ. ತೆಂಕುತಿಟ್ಟಿನ ಯಕ್ಷರಂಗದಲ್ಲಿ ತನ್ನದೇ ಛಾಪನ್ನು ನಿರ್ಮಿಸಿದ ಕನ್ನಡ -ತುಳು ಭಾಷೆಯ ಪ್ರಸಂಗಗಳಲ್ಲಿ ಏಕಪ್ರಕಾರ ಮಿಂಚಿದ ಪೆರುವಾಯಿ ನಾರಾಯಣ ಶೆಟ್ಟರು, ಕಂಚಿನ ಧ್ವನಿ, ಶ್ರುತಿಬದ್ಧ ಮಾತು ಹಾಗೂ ಅರ್ಥಪೂರ್ಣ ಸಂಭಾಷಣೆಗೆ ಹೆಸರಾಗಿದ್ದರು.
ಕಟೀಲುಮೇಳದ ಕಲಾವಿದರಾಗಿದ್ದ ಅವರು ನಿರ್ವಹಿಸುತ್ತಿದ್ದಾಗ ರಕ್ತಬೀಜ, ಹಿರಣ್ಯಕಷ್ಯಪು, ಕಂಸ, ಸುಂದರರಾವಣ, ಋತುಪರ್ಣ, ಹನೂಮಂತ, ಜಾಬಾಲಿ, ಅರುಣಾಸುರ, ಹಿರಣ್ಯಾಕ್ಷ, ಶಿಶುಪಾಲ ಮುಂತಾದ ಹಲವು ಪಾತ್ರಗಳನ್ನು ಬಹಳ ಪರಿಣಾಮಕಾರಿಯಾಗಿ ರಂಗದಲ್ಲಿ ಬಿಂಬಿಸಿ ಖ್ಯಾತರಾದವರು. ತುಳು ಪ್ರಸಂಗಗಳ ಪಾತ್ರನಿರ್ವಹಣೆಯಲ್ಲೂ ವೈಶಿಷ್ಟ್ಯತೆಯನ್ನು ಮೆರೆದವರು. ಇವರ ಕೋಟಿ, ದೇವುಪೂಂಜ ಮುಂತಾದ ಪಾತ್ರಗಳು ಬಹಳ ಪ್ರಸಿದ್ಧ ಪಡೆದಿತ್ತು. 2016ನೇ ಸಾಲಿನ ಚೊಚ್ಚಲ “ಯಕ್ಷಧ್ರುವ ಪಟ್ಲ ಪ್ರಶಸ್ತಿ” ಸೇರಿದಂತೆ ಹಲವು ಸನ್ಮಾನ ಇವರಿಗೆ ಸಂದಿದೆ.
