LATEST NEWS
ಯಕ್ಷಗಾನದ ವೇಷ ಕಳುಚುವಾಗಲೇ ಹೃದಯಾಘಾತದಿಂದ ಕಲಾವಿದ ಗಂಗಾಧರ ಪುತ್ತೂರು ನಿಧನ
ಮಂಗಳೂರು ಮೇ 02:ಯಕ್ಷಗಾನ ರಂಗದಲ್ಲಿ ಕುಣಿತ ಮುಗಿಲಿ ಚೌಕಿಗೆ ಮರಳಿ ವೇಷ ಕಳಚುವ ವೇಳೆ ಯಕ್ಷಗಾನ ಕಲಾವಿದರೊಬ್ಬರು ಹೃದಯಾಘಾತದಿಂದ ನಿಧನರಾದ ಘಟನೆ ಬುಧವಾರ ಕೋಟ ಗಾಂಧಿ ಮೈದಾನದಲ್ಲಿ ನಡೆದಿದೆ. ಮೃತರು ಶ್ರೀ ಧರ್ಮಸ್ಥಳ ಯಕ್ಷಗಾನ ಮೇಳದಲ್ಲಿ 42 ವರ್ಷ ತಿರುಗಾಟ ನಿರ್ವಹಿಸಿದ ಹಿರಿಯ ಸವ್ಯಸಾಚಿ ಕಲಾವಿದ ಗಂಗಾಧರ ಪುತ್ತೂರು (59 ವರ್ಷ).
ಬುಧವಾರ ಕೋಟ ಗಾಂಧಿ ಮೈದಾನದಲ್ಲಿ ನಡೆದ ಯಕ್ಷಗಾನದಲ್ಲಿ ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಕುಕ್ಕಿತ್ತಾಯನ ವೇಷ ನಿರ್ವಹಿಸಿ, ಚೌಕಿಗೆ ಮರಳಿ ಕಿರೀಟ ಆಭರಣಗಳನ್ನು ತೆಗೆದಿಟ್ಟು ಮುಖದ ಬಣ್ಣ ತೆಗೆಯುತ್ತಿರುವಾಗ ಅವರಿಗೆ ತೀವ್ರ ಹೃದಯಾಘಾತವಾಗಿ, ಮೃತಪಟ್ಟಿದ್ದಾರೆ.
ನಾರಾಯಣ ಮಯ್ಯ ಮತ್ತು ಲಕ್ಷ್ಮಿ ದಂಪತಿಯ ಪುತ್ರನಾಗಿ 1964ರಲ್ಲಿ ಪುತ್ತೂರು ತಾಲ್ಲೂಕಿನ ಸೇಡಿಯಾಪು ಮನೆಯಲ್ಲಿ ಜನಿಸಿದ ಅವರು, ಏಳನೇ ತರಗತಿವರೆಗೆ ವಿದ್ಯಾಭ್ಯಾಸ ಪಡೆದು, ನಂತರ ಕೆ.ಗೋವಿಂದ ಭಟ್, ಕರ್ಗಲ್ಲು ವಿಶ್ವೇಶ್ವರ ಭಟ್ ಅವರಲ್ಲಿ ನಾಟ್ಯಾಭ್ಯಾಸ ಕಲಿತರು.
18ನೇ ವಯಸ್ಸಿನಿಂದ ಮೇಳ ತಿರುಗಾಟ ಆರಂಭಿಸಿದ ಅವರು, ಸ್ತ್ರೀ ವೇಷ, ಪುಂಡು ವೇಷ, ರಾಜ ವೇಷ ನಿರ್ವಹಿಸುವಲ್ಲಿ ಎತ್ತಿದ ಕೈಯಾಗಿದ್ದರು.