BANTWAL
ಉಪ್ಪಿನಂಗಡಿ – ಚಿಕನ್ ಫ್ರೈಯಲ್ಲಿ ಹುಳ ಹೊಟೇಲ್ ಬಂದ್ ಮಾಡಿಸಿದ ಅಧಿಕಾರಿಗಳು…!!
ಉಪ್ಪಿನಂಗಡಿ ಜನವರಿ 13: ಗ್ರಾಹಕರೊಬ್ಬರಿಗೆ ನೀಡಿದ್ದ ಚಿಕನ್ ಪ್ರೈ ನಲ್ಲಿ ಹುಳವಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೆ ಪುತ್ತೂರು ತಹಶೀಲ್ದಾರ್ ನೇತೃತ್ವದ ತಂಡ ದಾಳಿ ನಡೆಸಿ ಹೊಟೇಲನ್ನು ಮುಚ್ಚಿಸಿದ ಘಟನೆ ಉಪ್ಪಿನಂಗಡಿಯಿಂದ ವರದಿಯಾಗಿದೆ.
ಉಪ್ಪಿನಂಗಡಿಯ ಹಳೇ ಬಸ್ ನಿಲ್ದಾಣದ ಪರಿಸರದಲ್ಲಿನ ಮಾಂಸಾಹಾರಿ ಹೊಟೇಲೊಂದರಲ್ಲಿ ಗ್ರಾಹಕನಾಗಿ ಹೋಗಿದ್ದ ವೇಳೆ ನೀಡಲಾದ ಚಿಕನ್ ಫ್ರೈಯಲ್ಲಿ ಹುಳವೊಂದು ಕಾಣಿಸಿಕೊಂಡಿತ್ತೆನ್ನಲಾಗಿದೆ. ಈ ಮಾಹಿತಿಯು ಭಾರೀ ಪ್ರಮಾಣದಲ್ಲಿ ವೈರಲ್ ಆದಾಗ ಎಚ್ಚೆತ್ತ ಜಿಲ್ಲಾಡಳಿತ ಈ ಬಗ್ಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಸತ್ಯ ಶೋಧನೆ ನಡೆಸಲು ನಿರ್ದೇಶನ ನೀಡಿತು.
ಅದರಂತೆ ಪುತ್ತೂರು ತಹಶೀಲ್ದಾರ್ ಹಾಗೂ ಅಧಿಕಾರಿಗಳ ತಂಡ ಗುರುವಾರ ರಾತ್ರಿ ಡಿಢೀರ್ ದಾಳಿ ನಡೆಸಿ ಆಹಾರ ಖಾದ್ಯಗಳ ತಪಾಸಣೆ ನಡೆಸಿತು. ಮಾಂಸ ಸಂಗ್ರಹಣಾ ಫ್ರಿಡ್ಜ್‌ಗಳನ್ನು ಪರಿಶೀಲಿಸಿತು. ಕೆಲವೊಂದು ಖಾದ್ಯಗಳ ಸ್ಯಾಂಪಲ್ ಗಳನ್ನು ಪರೀಕ್ಷಾಕೇಂದ್ರಕ್ಕೆ ಕಳುಹಿಸಲು ಸಂಗ್ರಹಿಸಲಾಯಿತು. ಈ ವೇಳೆ ಹೋಟೇಲ್ ಉದ್ಯಮಕ್ಕೆ ಸಂಬಂಧಿಸಿ ಪಂಚಾಯತ್ ಪರವಾನಿಗೆ, ಆಹಾರ ವಿಭಾಗದ ಪರವಾನಿಗೆ, ಆರೋಗ್ಯ ಇಲಾಖಾ ಪರವಾನಿಗೆಯನ್ನು ಹೊಂದದೇ ಇರುವುದು ಕಂಡು ಬಂದಾಗ ತಹಶೀಲ್ದಾರ್ ಹೊಟೇಲನ್ನು ಮುಚ್ಚಿಸಲು ನಿರ್ದೇಶನ ನೀಡಿದರು. ಅದರಂತೆ ಅಧಿಕಾರಿಗಳು ಹೊಟೇಲನ್ನು ಬಂದ್ ಮಾಡಿಸಿದರು.