Connect with us

UDUPI

ಪರಿಸರ ಸಮತೋಲನ ಕಾಪಾಡಿ: ನ್ಯಾ. ಶಾಂತವೀರ ಶಿವಪ್ಪ

Share Information

ಉಡುಪಿ, ಜೂನ್ 5 : ದೈನಂದಿನ ಜೀವನದಲ್ಲಿ ನಮ್ಮ ಸುತಮುತ್ತಲಿನ ಪರಿಸರದಲ್ಲಿ ಪರಿಸರ ಸ್ನೇಹಿ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಪರಿಸರ ಸಮತೋಲನ ಕಾಪಾಡುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಧ್ಯಕ್ಷ ಶಾಂತವೀರ ಶಿವಪ್ಪ ಹೇಳಿದರು. ಅವರು ಇಂದು ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಉಡುಪಿ, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉಡುಪಿ ಇವರ ಸಹಯೋಗದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಪರಿಸರ ಜಾಗೃತಿಯ ಕಾರಣ ರಾಜ್ಯದಲ್ಲಿ ಪ್ರತೀ ವರ್ಷ ಶೇ. 1.5 ರಷ್ಟು ಅರಣ್ಯದ ಬೆಳವಣಿಗೆ ಆಗುತ್ತಿದ್ದು , ಹಸಿರು ವಲಯ ಹೆಚ್ಚಳವಾಗುತ್ತಿದೆ. ಪರಿಸರ ಸಂರಕ್ಷಣೆಗಾಗಿ ಗಿಡಗಳನ್ನು ನೆಡುವಾಗ ಒಂದೇ ರೀತಿಯ ಗಿಡಗಳನ್ನು ನೆಡದೇ ಆ ಪರಿಸರಕ್ಕೆ ಸೂಕ್ತವಾದ ಹಾಗೂ ಹಣ್ಣಿನ ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಪರಿಸರ ಸಮತೋಲನ ಕಾಪಾಡಬೇಕು. ಅರಣ್ಯ ಪ್ರದಶದಲ್ಲಿ ಹಣ್ಣಿನ ಗಿಡಗಳನ್ನು ನೆಡುವುದರಿಂದ ಮಾನವ ಮತ್ತು ವನ್ಯ ಜೀವಿ ಸಂಘರ್ಷ ತಡೆಯಲು ಸಾಧ್ಯ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಪ್ಲಾಸ್ಟಿಕ್ ಮಾಲಿನ್ಯ ನಿಯಂತ್ರಣ ಮಾಡಬೇಕು ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಮಾತನಾಡಿ, ಪರಿಸರ ನಾಶದಿಂದ ಮಾನವ ಹಾಗೂ ಪ್ರಾಣಿ ಸಂಕುಲದ ನಾಶವಾಗಲಿದ್ದು, ಅಂತರ್ಜಲ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಪ್ರಮುಖವಾದುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮಾತನಾಡಿ, ಪ್ರಕೃತಿಯು ಮಾನವನ ಸಹಜ ಅವಶ್ಯಕತೆಗಳನ್ನು ಪೂರೈಸಲಿದೆ ಆದರೆ ದುರಾಸೆಗಳನ್ನಲ್ಲ. ಪರಿಸರ ಸಂರಕ್ಷಣೆಯ ಕಾರ್ಯಕ್ರಮಗಳಲ್ಲಿ ವ್ಯವಸ್ಥಿತ ರೀತಿಯ ಯೋಜನೆಗಳನ್ನು ರೂಪಿಸಿ, ಅದರಂತೆ ಅನುಷ್ಠಾನಗೊಳಿಸಬೇಕು. ಉಡುಪಿ ಜಿಲ್ಲೆ ನೈಸರ್ಗಿಕ ಸಮೃದ್ದಿಯಿಂದ ಕೂಡಿದ ಜಿಲ್ಲೆಯಾಗಿದ್ದು , ಜಿಲ್ಲೆಯಲ್ಲಿನ ಪರಿಸರ ಸಂರಕ್ಷಣೆಯ ಬಗ್ಗೆ ಪ್ರತಿಯೊಬ್ಬರಲ್ಲೂ ಸ್ವಯಂ ಜಾಗೃತಿ ಮೂಡಬೇಕು ಎಂದರು. ಕಾರ್ಯಕ್ರಮದಲ್ಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ , ಜಿಲ್ಲಾ ಪ್ರಾದೇಶಿಕ ಪರಿಸರ ಅಧಿಕಾರಿ ಡಾ.ಕೆ.ಎಂ. ರಾಜು ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ವಿಷನ್ ಲೈಪ್ ಕಾರ್ಯಕ್ರಮ ನಡೆಯುತ್ತಿದ್ದು, ಅದರಂತೆ ನಮ್ಮ ಜೀವನ ಶೈಲಿಯಲ್ಲಿ ನೀರು, ವಿದ್ಯುತ್ ನ ಮಿತಬಳಕೆ, ಸಾವಯವ ಆಹಾರ ಉತ್ಪಾದನೆ ಮತ್ತು ಬಳಕೆಯ ಮೂಲಕ ಪರಿಸರ ಸಂರಕ್ಷಣೆ ಸಾಧ್ಯವಾಗಲಿದ್ದು, ದೈನಂದಿನ ಜೀವನದಲ್ಲಿ ಪ್ಲಾಸ್ಟಿಕ್ ನ ಕಡಿಮೆ ಬಳಕೆ , ಮರುಬಳಕೆ, ನಿಷೇಧದ ಮೂಲಕ ಅದರ ದುಷ್ಪರಿಣಾಮಗಳನ್ನು ತಡೆಯಲು ಸಾಧ್ಯವಾಗಲಿದೆ ಎಂದರು.


Share Information
Advertisement
Click to comment

You must be logged in to post a comment Login

Leave a Reply