BELTHANGADI
ಬೆಳ್ತಂಗಡಿ ತಾಲೂಕಿನಲ್ಲಿ ಕಾಮಗಾರಿ, ಅಕ್ರಮ ಸಕ್ರಮ ಹೆಸರಿನಲ್ಲಿ ಭಾರಿ ಅವ್ಯವಹಾರ : ವಸಂತ ಬಂಗೇರ ಆರೋಪ
ಬೆಳ್ತಂಗಡಿ, ಮಾರ್ಚ್ 16: ತಾಲೂಕಿನಲ್ಲಿ ಕಾಮಗಾರಿಗಳಲ್ಲಿ ಹಾಗೂ ಅಕ್ರಮ ಸಕ್ರಮ ಜಮೀನು ಮಂಜೂರಾತಿ ಹೆಸರಿನಲ್ಲಿ ಭಾರಿ ಹಣದ ಅವ್ಯವಹಾರ ನಡೆಯುತ್ತಿದೆ ಎಂದು ಮಾಜಿ ಶಾಸಕ ಕೆ ವಸಂತ ಬಂಗೇರ ಆರೋಪಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬಿಜೆಪಿ ಕಾರ್ಯಕರ್ತರು ಹಣ ಪಡೆದು ಜನರನ್ನು ವಂಚಿಸುತ್ತಿದ್ದಾರೆ. ಹಣ ಮರಳಿ ಕೇಳಿದರೆ ಹಲ್ಲೆ ನಡೆಸುತ್ತಿದ್ದು, ಈ ಬಗ್ಗೆ ದೂರು ನೀಡಿದರೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸುತ್ತಿಲ್ಲ ಎಂದರು.
ಬೆಳ್ತಂಗಡಿಯ ಪ್ರವಾಸಿ ಮಂದಿರದ ಗುತ್ತಿಗೆ ನೀಡುವಿಕೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ ಅವರು, ಇಲ್ಲಿ ಶಾಸಕರ ಕಮಿಷನ್ ದಂಧೆ ಕೆಲಸ ಮಾಡಿದೆ. ಟೆಂಡರ್ ಪ್ರಕ್ರಿಯೆಯನ್ನೇ ಹೈಜಾಕ್ ಮಾಡಿದ್ದಾರೆ. ಎರಡನೇ ಹಂತದ ಟೆಂಡರ್ ಕರೆಯದೆ ಕಾಮಗಾರಿಯನ್ನು ಮಾಡಲಾಗುತ್ತಿದೆ. ಅಲ್ಲಿ ಟೆಂಡರ್ ಹಾಕದಂತೆ ಗುತ್ತಿಗೆ ದಾರರ ಮೇಲೆ ಒತ್ತಡ ಹೇರಲಾಗುತ್ತಿದೆ. ಒಟ್ಟು ಟೆಂಡರ್ ಪ್ರಕ್ರಿಯೆಯಲ್ಲಿ ಹಾಗೂ ಕಾಮಗಾರಿಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.
ಇತ್ತಿಚೆಗೆ ಶಿಲಾನ್ಯಾಸ ಮಾಡಿದ 411 ಕೋಟಿ ರೂ. ಕಾಮಗಾರಿಗಳಲ್ಲಿ ಹೆಚ್ಚಿನ ಕಾಮಗಾರಿಗಳಿಗೆ ಸರಕಾರದ ಮಂಜೂರಾತಿ ಆಗಿಲ್ಲ. ಈ ಬಗ್ಗೆ ಇಲ್ಲಿನ ಇಂಜಿನಿಯರ್ ಗಳಿಗೆ ಮಾಹಿತಿಯೇ ಇಲ್ಲ. ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಶಂಕುಸ್ಥಾಪನೆ ನಡೆಸಿ ಜನರನ್ನು ವಂಚಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಚುನಾವಣೆಯಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬರಲಿದ್ದು, ಸರಕಾರದ ಬೊಗಸ್ ಕಾಮಗಾರಿಗಳ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದರು. ದೂರುದಾರ ವೆಂಕಟರಮಣ ಗೌಡ ಮಾತನಾಡಿ ನನಗೆ 1.60 ಎಕರೆ ಜಮೀನು ಮಂಜೂರು ಮಾಡಿ ಕೊಡುತ್ತೇನೆ ಎಂದು ಸ್ಥಳೀಯ ಬಿಜೆಪಿ ಕಾರ್ಯಕರ್ತ ಪ್ರಾರಂಭದಲ್ಲಿ 20 ಸಾವಿರ ರೂ., ಬಳಿಕ 30 ಸಾವಿರ ಪಡೆದಿದ್ದು ಇದುವರೆಗೂ ಮಾಡಿಕೊಡಲಿಲ್ಲ.
ಈಗ ಹಣ ವಾಪಾಸು ಕೇಳಿದ್ದಕ್ಕೆ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ಇತರರಿಂದಲೂ ಹಣ ಪಡೆದಿದ್ದು ನಾನು ಧರ್ಮಸ್ಥಳ ಠಾಣೆಗೆ ದೂರು ನೀಡಿದರು ನನಗೆ ನ್ಯಾಯ ಸಿಗಲಿಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಮನೋಹರ್ ಕುಮಾರ್ ಉಪಸ್ಥಿತರಿದ್ದರು
You must be logged in to post a comment Login