LATEST NEWS
ದೂರು ಕೊಡಲು ಬಂದ ಅಪ್ರಾಪ್ತೆ ಮೇಲೆ ಹಲ್ಲೆ – ಮೂವರು ಮಹಿಳಾ ಪೊಲೀಸರ ವಿರುದ್ಧ ಎಫ್‍ಐಆರ್
ಮಂಗಳೂರು ನವೆಂಬರ್ 7: ದೂರು ಕೊಡಲು ಬಂದ ಅಪ್ರಾಪ್ತೆಯ ಮೇಲೆ ಮೂವರ ಮಹಿಳಾ ಪೊಲೀಸರು ಮನಬಂದಂತೆ ಹಲ್ಲೆ ನಡೆಸಿದ್ದು, ಪೊಲೀಸ್ ಹಲ್ಲೆ ವಿರುದ್ದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಹಲ್ಲೆ ನಡೆಸಿದ್ದ ಮೂವರು ಮಹಿಳಾ ಪೊಲೀಸರ ವಿರುದ್ಧ ಎಫ್‍ಐಆರ್ ದಾಖಲಾದ ಘಟನೆ ಮಂಗಳೂರಿನ ಬಜ್ಪೆಯಲ್ಲಿ ನಡೆದಿದೆ.
ಮಂಗಳೂರಿನ ಹೊರವಲಯದ ಗಂಜಿಮಠದ ಅಪ್ರಾಪ್ತೆ, ಮೂಡಬಿದಿರೆಯ ಯುವಕನೋರ್ವನನ್ನು ಪ್ರೀತಿಸುತ್ತಿದ್ದಳು. ಆದರೆ ಆತ ಪ್ರತಿದಿನ ಫೋನ್ ಮಾಡಿ ಟಾರ್ಚರ್ ಕೊಡುತ್ತಿದ್ದ ಹಿನ್ನೆಲೆಯಲ್ಲಿ ತನ್ನ ಹೆತ್ತವರೊಂದಿಗೆ ಬಂದು ಬಜ್ಪೆ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ದೂರು ನೀಡಿದ್ದಳು. ಆದರೆ ಬಜ್ಪೆ ಪೊಲೀಸ್ ಠಾಣೆಯ ಪೊಲೀಸರು ದೂರು ದಾಖಲಿಸಿಕೊಳ್ಳದೆ, ದೂರು ನೀಡಲು ಬಂದಿದ್ದ ಆಕೆಯನ್ನು ವಿಚಾರಣೆ ನಡೆಸುವ ನೆಪದಲ್ಲಿ ಲಾಠಿಯಿಂದ ಹಿಗ್ಗಾಮುಗ್ಗ ಥಳಿಸಿದ್ದಾರೆ.
ಮೂವರು ಮಹಿಳಾ ಪೊಲೀಸರು ಕೈ, ಸೊಂಟ ಹಾಗೂ ಕಾಲಿನ ಅಡಿಭಾಗಕ್ಕೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದಾಗಿ ರಕ್ತ ಹೆಪ್ಪುಗಟ್ಟಿದ್ದು ಅಪ್ರಾಪ್ತೆ ಮಂಗಳೂರಿನ ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಹಲ್ಲೆ ನಡೆಸಿದ ಬಜ್ಪೆ ಠಾಣೆಯ ಮೂವರು ಮಹಿಳಾ ಪೊಲೀಸರ ವಿರುದ್ಧ ಮಂಗಳೂರಿನ ಪಾಂಡೇಶ್ವರದಲ್ಲಿರುವ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಜಿಲ್ಲಾ ಕಾಂಗ್ರೆಸ್ ನಿಯೋಗ ಹುಡುಗಿಯನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿದ್ದು, ತಪ್ಪಿತಸ್ಥ ಪೊಲೀಸರ ವಿರುದ್ದ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, ಮೂವರು ಮಹಿಳಾ ಪೊಲೀಸರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಮಹಿಳಾ ಠಾಣೆಯ ಇನ್ಸ್ ಪೆಕ್ಟರ್ ತನಿಖೆ ನಡೆಸುತ್ತಾರೆ. ವಿಚಾರಣೆ ನಡೆಸಿ ಪೊಲೀಸರ ತಪ್ಪಿದ್ದರೆ ಆಡಳಿತಾತ್ಮಕ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.