DAKSHINA KANNADA
ಒಂಟಿ ಮಹಿಳೆಗೆ ರಾತ್ರಿ ವೇಳೆ ಅರ್ಧದಲ್ಲೇ ಕೈ ಕೊಟ್ಟ ಸರಕಾರಿ ಬಸ್
ಒಂಟಿ ಮಹಿಳೆಗೆ ರಾತ್ರಿ ವೇಳೆ ಅರ್ಧದಲ್ಲೇ ಕೈ ಕೊಟ್ಟ ಸರಕಾರಿ ಬಸ್
ಪುತ್ತೂರು, ನವಂಬರ್ 13: ಮಹಿಳೆಯರಿಗೆ ಗೌರವ, ರಕ್ಷಣೆ ಕೊಡಬೇಕೆಂದು ಸರಕಾರವೇ ಎಲ್ಲಾ ಕಡೆ ಹೇಳಿಕೊಂಡು ತಿರುಗಾಡುತ್ತಿದೆ. ಆದರೆ ಸರಕಾರದ ಅಂಗಸಂಸ್ಥೆಗಳೇ ಮಹಿಳೆಯರರಿಗೆ ಅವಮಾನ ಮಾಡುವಂತಹ ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತಿದೆ. ಇಂಥಹುದೇ ಒಂದು ಘಟನೆ ಪುತ್ತೂರು-ಮಂಗಳೂರು ನಡುವೆ ಸಂಚರಿಸುವ ಕೆ.ಎಸ್.ಆರ್.ಟಿ.ಸಿ ಬಸ್ಸೊಂದರಲ್ಲಿ ನಡೆದಿದೆ. ನವಂಬರ್ 13 ರಂದು ರಾತ್ರಿ 7.40 ರ ಸುಮಾರಿಗೆ ಪುತ್ತೂರು ಬಸ್ ನಿಲ್ದಾಣದಿಂದ ಹೊರಟ ಲಿಮಿಟೆಡ್ ಸ್ಟಾಪ್ ಬಸ್ ( KA 19 F 2950) ಬಸ್ ಗೆ ಮಂಡಕ್ಕಿ ಮಾರಾಟ ಮಾಡಿ ಜೀವನ ಸಾಗಿಸುವ ಬಡ ಮಹಿಳೆಯೊಬ್ಬರು ಹತ್ತಿದ್ದಾರೆ. ತುಂಬೆಗೆ ಹೋಗಬೇಕಾಗಿರುವ ಕಾರಣ ಆಕೆ ಬಸ್ ನಿಲ್ದಾಣದಲ್ಲಿ ಬೇರೆ ಸೆಟಲ್ ಬಸ್ ಇಲ್ಲದ ಕಾರಣ ಮೇಲೆ ಕಾಣಿಸಿದ ನೊಂದಣಿ ಸಂಖ್ಯೆಯ ಬಸ್ಸನ್ನು ಹತ್ತಿದ್ದಾರೆ. ಪುತ್ತೂರು ಬಸ್ ನಿಲ್ದಾಣದಲ್ಲಿ ರಾತ್ರಿ 7 ಗಂಟೆಯ ಬಳಿಕ ಸೆಟಲ್ ಬಸ್ ಗಳ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುತ್ತಿದ್ದ ಕಾರಣ ಬೇರೆ ದಾರಿ ಕಾಣದೆ ಆ ಮಹಿಳೆ ಲಿಮಿಟೆಡ್ ಸ್ಟಾಪ್ ಬಸ್ಸನ್ನು ಹತ್ತಿದ್ದರು. ತುಂಬೆಯಲ್ಲಿ ಅಧಿಕೃತ ನಿಲುಗಡೆ ಇಲ್ಲದ ಕಾರಣ ಪರಂಗಿಪೇಟೆಗೆ ಆಕೆ ಟಿಕೆಟ್ಟನ್ನು ತೆಗೆದುಕೊಂಡಿದ್ದರು. ಬಸ್ ಬಿ.ಸಿ.ರೋಡ್ ತಲುಪುತ್ತಿದ್ದಂತೆ ಮಹಿಳೆ ತನ್ನ ಮಂಡಕ್ಕಿ ಮೂಟೆಯೊಂದಿಗೆ ಬಸ್ ಕಂಡಕ್ಟರ್ ಹಾಗೂ ಡ್ರೈವರ್ ಬಳಿ ತುಂಬೆ ನಿಲ್ದಾಣದಲ್ಲಿ ಬಸ್ಸನ್ನು ನಿಲ್ಲಿಸುವಂತೆ ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಅಲ್ಲದೆ ಪರಂಗಿಪೇಟೆಯಲ್ಲಿ ಇಳಿಸಿದ್ದೇ ಆದಲ್ಲಿ ಮಂಗಳೂರು ಕಡೆಯಿಂದ ಮತ್ತೆ ತುಂಬೆ ಕಡೆಗೆ ಬಸ್ ಸಿಗುವುದಿಲ್ಲ ಎನ್ನುವ ವಸ್ತುಸ್ಥಿತಿಯನ್ನೂ ಬಸ್ ನ ಇಬ್ಬರು ಸಿಬ್ಬಂದಿಗಳ ಬಳಿಯೂ ಹೇಳುತ್ತಿದ್ದರು. ಆದರೆ ಬಸ್ಸಿನ ಎಕ್ಸಿಲೇಟರ್ ಅನ್ನು ತನ್ನ ಕಾಲಿಗೆ ಅಂಟಿಸಿಕೊಂಡಂತೆ ವರ್ತಿಸಿದ ಬಸ್ ನ ಚಾಲಕ ಒಂಟಿ ಮಹಿಳೆ ಎನ್ನುವುದನ್ನೂ ನೋಡದೆ ಸೀದಾ ಬಸ್ಸನ್ನು ಪರಂಗಿಪೇಟೆಯಲ್ಲೇ ನಿಲ್ಲಿಸಿದ್ದಾನೆ. ಪರಂಗಿಪೇಟೆಯಲ್ಲಿ ಇಳಿದ ಮಹಿಳೆ ಅಸಹಾಯಕಳಾಗಿ ಮತ್ತೆ ಪರಂಗಿಪೇಟೆಯಿಂದ ತುಂಬೆಗೆ ರಾತ್ರಿ ಸುಮಾರು 9 ಗಂಟೆಯ ಹೊತ್ತಲ್ಲಿ ಬಸ್ ನಿಲ್ದಾಣದಲ್ಲಿ ಒಬ್ಬಳೇ ಬಸ್ ಗಾಗಿ ಕಾಯುವಂತಹ ಸ್ಥಿತಿಗೆ ಬಸ್ ಸಿಬ್ಬಂದಿಗಳು ತಂದೊಡ್ಡಿದ್ದಾರೆ. ಲಿಮಿಟೆಡ್ ಬಸ್ ಆದ ಕಾರಣ ತುಂಬೆಯಲ್ಲಿ ಬಸ್ ನಿಲ್ಲಿಸಿಲ್ಲ ಎಂದು ಸಬೂಬು ಕೊಡುವ ಆ ಬಸ್ ನ ಸಿಬ್ಬಂದಿಗಳು ಬಿ.ಸಿ.ರೋಡ್ ನ ಡಿಪ್ಪೋ ಬಳಿ ಸಿಕ್ಕಿ ಸಿಕ್ಕವರಿಗೆ ಬಸ್ ನಿಲ್ಲಿಸುವಾಗ ಅಲ್ಲಿ ಅಧಿಕೃತ ಬಸ್ ನಿಲುಗಡೆ ಇದೆಯೋ ಎನ್ನುವುದನ್ನು ಜನತೆಗೆ ಹೇಳಬೇಕಿದೆ. ಸಾರ್ವಜನಿಕರ ತೆರಿಗೆ ಹಣದಲ್ಲಿ ಸಂಬಳ ಪಡೆಯುತ್ತಿರುವ ಈ ಸಿಬ್ಬಂದಿಗಳು ಸಾರ್ವಜನಿಕರ ಕಷ್ಟಕ್ಕೆ ಸ್ಪಂದಿಸದೇ ಇದ್ದಲ್ಲಿ ಇಂಥಹ ಸಿಬ್ಬಂದಿಗಳು ಇದ್ದರೆಷ್ಟು ಬಿಟ್ಟರೆಷ್ಟು ಎನ್ನುವ ಆರೋಪ ಸಾರ್ವಜನಿಕರದ್ದಾಗಿದೆ. ಮಹಿಳೆ ಎನ್ನುವುದನ್ನೂ ನೋಡದೆ ಅನಾಗರಿಕರಂತೆ ವರ್ತಿಸಿದ ಈ ಸಿಬ್ಬಂದಿಗಳ ವಿರುದ್ಧ ಕ್ರಮ ಜರುಗಿಸಬೇಕಿದೆ. ಬಸ್ ಸಿಬ್ಬಂದಿಗಳ ಈ ನಡವಳಿಕೆಯನ್ನು ಪುತ್ತೂರು ಕೆ.ಎಸ್.ಆರ್.ಟಿ.ಸಿ ವಿಭಾಗದ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ, ಆ ಕಡೆಯಿಂದ ಯಾವುದೇ ಸ್ಪಂದನೆ ಮಾತ್ರ ದೊರೆತಿಲ್ಲ. ಅಧಿಕಾರಿಗಳ ಈ ಮೌನ ಸಿಬ್ಬಂದಿಗಳ ವರ್ತನೆಗೆ ಮೌನ ಸಮ್ಮಿತಿಯೇ ಎನ್ನುವ ಸಂಶಯವೂ ಮೂಡುತ್ತಿದೆ.