KARNATAKA
ಬಳ್ಳಾರಿ ಬಿಜೆಪಿ ಸಂಸದ ಪುತ್ರನ ಮೇಲೆ ಲವ್, ಸೆಕ್ಸ್ ದೋಖಾ ಆರೋಪ, ದೂರು ದಾಖಲು..!

ಬೆಂಗಳೂರು: ಬಳ್ಳಾರಿ ಬಿಜೆಪಿ ಸಂಸದ ದೇವೇಂದ್ರಪ್ಪ ಅವರ ಪುತ್ರ ರಂಗನಾಥ್ ವಿರುದ್ದ ಲವ್, ಸೆಕ್ಸ್ ದೋಖಾ ಆರೋಪ ಕೇಳಿ ಬಂದಿದ್ದು ನೊಂದ ಯುವತಿ ಇದೀಗ ಠಾಣಾ ಮೆಟ್ಟಲೇರಿದ್ದಾಳೆ. ರಂಗನಾಥ್ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ, ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಎಂದು ಸಂತ್ರಸ್ಥೆ ಆರೋಪಿಸಿದ್ದಾಳೆ.
ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸರಾಗಿ ಕಾರ್ಯನಿರ್ವಹಿಸುತ್ತಿರುವ ರಂಗನಾಥ್ ಮೇಲೆ ಬೆಂಗಳೂರು ಮೂಲದ ಯುವತಿ ದೂರು ನೀಡಿದ್ದಾಳೆ.ಯುವತಿ ನೀಡಿದ ದೂರಿನ ಆಧಾರದ ಮೇಲೆ ಬೆಂಗಳೂರಿನ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಒಂದೂವರೆ ವರ್ಷದ ಹಿಂದೆ ಪಾರ್ಟಿವೊಂದರಲ್ಲಿ ಯುವತಿಯನ್ನು ಪರಿಚಯ ಮಾಡಿಕೊಂಡಿರುವ ರಂಗನಾಥ್, ಬಳಿಕ ಮೈಸೂರಿನ ಹೋಟೆಲ್ನಲ್ಲಿ ಆಕೆಯ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ್ದಾರೆ. ಆದರೆ ಈಗ ಮದುವೆಯಾಗಲು ಹಿಂದೇಟು ಹಾಕುತ್ತಿದ್ದಾರೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಇಬ್ಬರಿಗೂ ನೋಟಿಸ್ ಜಾರಿ ಮಾಡಿದ್ದಾರೆ. ವಿಚಾರಣೆಗೆ ಬರುವಂತೆ ರಂಗನಾಥ್ ಅವರಿಗೆ ನೋಟಿಸ್ ನೀಡಲಾಗಿದೆ ಮತ್ತು ಯುವತಿಗೆ ಸೂಕ್ತ ದಾಖಲೆ ಸಮೇತ ಠಾಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ. ರಂಗನಾಥ್ ಅವರು ಸಹ ಯುವತಿ ವಿರುದ್ಧ ಮೈಸೂರು ನಗರದ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದಾರೆ. ನನ್ನ ಖಾಸಗಿ ಫೋಟೋಗಳು ಮತ್ತು ವಿಡಿಯೋಗಳನ್ನು ಇಟ್ಟುಕೊಂಡು ಯುವತಿ ನನಗೆ ಬ್ಲಾಕ್‌ಮೇಲ್ ಮಾಡುತ್ತಿದ್ದು, 15 ಲಕ್ಷ ರೂ.ಗೆ ಬೇಡಿಕೆ ಇಟ್ಟಿರುವುದಾಗಿ ಎಂದು ಆರೋಪಿಸಿದ್ದಾರೆ.ಈ ಸಂಬಂಧ ವಿಜಯನಗರ ಪೊಲೀಸರು ಸಂತ್ರಸ್ಥ ಯುವತಿ ಮತ್ತು ಮತ್ತೊಬ್ಬ ವ್ಯಕ್ತಿ ಶ್ರೀನಿವಾಸ್ ಎಂಬುವವರ ವಿರುದ್ಧ ದೂರು ದಾಖಲಿಸಿದ್ದಾರೆ.
