SPORTS
ಗುರುವಿಲ್ಲದೇ ಸಾಧನೆ ಮಾಡಿ ಗಿನ್ನೆಸ್ ದಾಖಲೆ ಬರೆದ ಏಕಲವ್ಯ’ ರಕ್ಷಿತ್ ‘

ಗುರುವಿಲ್ಲದೇ ಸಾಧನೆ ಮಾಡಿ ಗಿನ್ನೆಸ್ ದಾಖಲೆ ಬರೆದ ಏಕಲವ್ಯ’ ರಕ್ಷಿತ್ ‘
ಮಂಗಳೂರು ಡಿಸೆಂಬರ್ 11. ಪ್ರೋತ್ಸಾಹ ನೀಡಿದರೂ ಸಾಧಿಸದ ಅನೇಕರು ನಮ್ಮೊಳಗೆ ಇರುವಾಗ ಇಲ್ಲೊಬ್ಬ ಏಕಲವ್ಯ ಗುರುವಿಲ್ಲದೇ ಸಾಧನೆ ಮಾಡಿ ಗಿನ್ನೆಸ್ ದಾಖಲೆ ಬರೆದಿದ್ದಾರೆ.
ಇವರೇ ಮೂಡುಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಉದ್ಯೋಗಿ ರಕ್ಷಿತ್ ಶೆಟ್ಟಿ.

ಗ್ರಾಮೀಣ ಪ್ರತಿಭೆಯಾದ ರಕ್ಷಿತ್ ಶೆಟ್ಟಿ ಕಳೆದ ದಶಕದಿಂದ ನಿರಂತರ ಸಾಧನೆ, ಪರಿಶ್ರಮ ಮಾಡಿ ದಾಖಲೆ ಓಟಗಾರನಾಗಿ ಸಾಧನೆ ಮೆರೆದಿದ್ದಾರೆ.
ಪ್ರೋತ್ಸಾಹದ ಕೊರತೆ ಇದ್ದರೂ ಸಾಧಿಸುವ ಛಲದಿಂದ ಕಡಿಮೆ ಅವಧಿಯಲ್ಲಿ ಇವರು ವಿಶಿಷ್ಟ ಸಾಧನೆಯಿಂದ ದಾಖಲೆ ಮಾಡಿದ್ದಾರೆ.
ವಿಶೇಷ ಎಂದರೆ ಈ ಮಹಾನ್ ಸಾಧಕ ರಕ್ಷಿತ್ ಶೆಟ್ಟಿಗೆ ಯಾವುದೇ ಗುರುಗಳಿಲ್ಲ.
10 ವರ್ಷಗಳ ಸಾಧನೆ ಮಾಡಿದ ಈತ ಕೇವಲ ಮೂರೇ ವರ್ಷಗಳಲ್ಲಿ ಮ್ಯಾರಥನ್ ನಲ್ಲಿ ಹನ್ನೆರಡು ದಾಖಲೆಗಳನ್ನು ಮಾಡುವಂತಾಗಿದೆ.
ಅದು ಕೂಡ ಉದ್ಯೋಗದಲ್ಲಿರುವಾಗಲೇ ಈ ಸಾಧನೆ ಮಾಡಿದ್ದಾರೆ.
ಕೇವಲ ಬಿಡುವಿನ ವೇಳೆಯನ್ನು ಮಾತ್ರ ರಕ್ಷಿತ್ ಅವರು ತಮ್ಮ ಸಾಧನೆಗಾಗಿ ಮೀಸಲಿಡುತ್ತಿದ್ದರು.
ರಕ್ಷಿತ್ ವಿಭಿನ್ನ ವೇಷ ಭೂಷಣಗಳೊಂದಿಗೆ ಮ್ಯಾರಥಾನ್, ಆಫ್ ಮ್ಯಾರಥನ್ ಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.
ಮುಂಬೈಯಲ್ಲಿ ನಡೆದ ಮ್ಯಾರಥಾನ್ ಗಳು, ಅದರಲ್ಲಿ ಬಂದ ಬಹುಮಾನಗಳು ಗಿನ್ನಿಸ್ ದಾಖಲೆ ಪಡೆಯಲು ಪ್ರೇರಣೆಯಾಯಿತು ಎನ್ನುತ್ತಾರೆ ರಕ್ಷಿತ್.
2014 ರಲ್ಲಿ ವಿಭಿನ್ನ ಭೂಷಣ ವೇಷ ಧರಿಸಿ ಒಂಬತ್ತು ರೇಸ್ ಗಳನ್ನು ಪೂರ್ಣಗೊಳಿಸಿ 2014 ರಲ್ಲಿ ಬೆಂಗಳೂರು ಹಾಗೂ ಮೈಸೂರು ಟಿಸಿಎಸ್ ಹತ್ತು ಕಿಲೋಮೀಟರ್ ರೇಸಲ್ಲಿ ದಾಖಲೆ ಮಾಡಿದರು.
2015 ರಲ್ಲಿ ಮತ್ತೆ ಎರಡು ಗಿನ್ನಿಸ್ ದಾಖಲೆ ಸಾಧಿಸಿದ್ದರು.
2015 ಡಿಸೆಂಬರ್ 5 ರಂದು ನಡೆದ ಎಸ್ ಬಿ ಐ ಬೆಂಗಳೂರು ಮಿಡ್ ನೈಟ್ ಆಫ್ ಮ್ಯಾರಥಾನ್ ನಲ್ಲಿ ಸಂಗೀತದ ಪರಿಕರದ ವೇಷದೊಂದಿಗೆ 1 ಗಂಟೆ 26 ನಿಮಿಷ 57 ಸೆಕೆಂಡ್ಸ್ ಮೂಲಕ ದಾಖಲೆ ನಿರ್ಮಿಸಿದರು.
ಎರಡು ವರ್ಷಗಳ ಕಡಿಮೆ ಅವಧಿಯಲ್ಲಿ ನಾಲ್ಕು ದಾಖಲೆ ಮಾಡಿದ ರಕ್ಷಿತ್ ಕಳೆದ ಒಂದೇ ವರ್ಷದ ಅವಧಿಯಲ್ಲಿ ಎಂಟು ದಾಖಲೆಗಳನ್ನು ಮಾಡುವ ಮೂಲಕ 14 ಗಿನ್ನೆಸ್ ದಾಖಲೆಗಳನ್ನು ತನ್ನ ಹೆಸರಿಗೆ ಬರೆಸಿಕೊಂಡರು.
ಕ್ರೀಡೆ ಬಗ್ಗೆ ಎಲ್ಲರೂ ಮಾತನಾಡುತ್ತಾರೆ ಆದರೆ ಪ್ರೋತ್ಸಾಹ ನೀಡುವವರು ಕೆಲವೇ ಕೆಲವು ಜನ ಮಾತ್ರ ಎಂದು ಬೇಸರದಿಂದಲೇ ಹೇಳುತ್ತಾರೆ ರಕ್ಷಿತ್.
ಕ್ರೀಡಾಳುಗಳಿಗೆ ಸಾಧನೆ ಮಾಡಲು ಆರ್ಥಿಕ ಸಹಾಯದ ಭಾರಿ ಅಗತ್ಯವಿರುತ್ತದೆ. ಈ ನಿಟ್ಟಿನಲ್ಲಿ ಉಳ್ಳವರು ಗಮನ ಹರಿಸಬೇಕೆನ್ನುತ್ತಾರೆ ಅವರು.
ಯಾವುದೇ ಸಮಸ್ಯೆಗಳು ಬಂದರೂ ಪದಕಗಳಿಗಾಗಿ ಮತ್ತು ನಾಡಿಗಾಗಿ ನನ್ನ ಓಟ ನಿರಂತರ ಎಂದು ವಿಶ್ವಾಸದಿಂದ ನುಡಿಯುತ್ತಾರೆ ರಕ್ಷಿತ್ ಶೆಟ್ಟಿ.