DAKSHINA KANNADA
ಪುತ್ತೂರಿನಲ್ಲಿ ಜನರ ನಿದ್ದೆಗೆಡಿಸಿದ ಒಂಟಿ ಸಲಗ
ಪುತ್ತೂರು ಡಿಸೆಂಬರ್ 27: ಪುತ್ತೂರಿನಲ್ಲಿ ಕಳೆದ ಕೆಲವು ದಿನಗಳಿಂದ ಜನರ ನಿದ್ದೆಗೆಡಿಸಿದ್ದ ಒಂಟಿ ಸಲಗ ಇದೀಗ ಕಾಡಿನ ದಾರಿ ಹಿಡಿದಿದೆ. ಇದರೊಂದಿಗೆ ಸಲಗದ ಕಾಟದಿಂದ ಜನರು ನಿಟ್ಟುಸಿರು ಬಿಡುವಂತಾಗಿದೆ.
ಕೆಯ್ಯೂರು ಗ್ರಾಮದ ದೇರ್ಲ ಭಾಗ ಸೇರಿದಂತೆ ಹಲವು ಕಡೆಗಳಲ್ಲಿ ಕೃಷಿ ಹಾನಿಯುಂಟು ಮಾಡುವ ಮೂಲಕ ಕೃಷಿಕರ ಹಾಗೂ ಗ್ರಾಮಸ್ಥರ ನಿದ್ದೆಗೆಡಿಸಿದ ಒಂಟಿ ಸಲಗ ನಿನ್ನೆ ಸಂಜೆ ವೇಳೆ ಸವಣೂರು ಗ್ರಾ.ಪಂ ವ್ಯಾಪ್ತಿಯ ಪಾಲ್ತಾಡು ಪರಿಸರದಲ್ಲಿ ಕಾಣಿಸಿಕೊಂಡಿದೆ.
ಪಾಲ್ತಾಡು ಶಾಲಾ ಬಳಿಯಿಂದಾಗಿ ಆನೆ ಉಪ್ಪಳಿಗೆ ಭಾಗಕ್ಕೆ ತನ್ನ ಪ್ರಯಾಣ ಬೆಳೆಸಿದೆ ಎಂದು ಈ ಭಾಗದ ಗ್ರಾಮಸ್ಥರು ತಿಳಿಸಿದ್ದಾರೆ. ಆನೆ ಇರುವ ಪ್ರದೇಶಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮಸ್ಥರು ಯಾವುದೇ ರೀತಿಯ ಭಯ ಪಡುವ ಅಗತ್ಯವಿಲ್ಲ ಎಂದು ಗ್ರಾಮಸ್ಥರಿಗೆ ಧೈರ್ಯ ತುಂಬಿದ್ದಾರೆ.
ಇನ್ನು ಉಪ್ಪಿನಂಗಡಿಯ ಹಿರೇಬಂಡಾಡಿ, ಮಾವಿನಕಟ್ಟೆ, ಹಲಸಿನಕಟ್ಟೆ, ಜಾಲು, ಜಡೆಂಕಿ ಭಾಗದಲ್ಲಿ ಈ ಆನೆ ಕಳೆದೆರಡು ದಿನಗಳ ಹಿಂದೆ ಪ್ರತ್ಯಕ್ಷಗೊಂಡಿತ್ತು. ಜೊತೆಗೆ ಹಲವು ಕೃಷಿಗಳಿಗೆ ಹಾನಿಗೊಳಿಸಿತ್ತು.
ಕಳೆದ ಹಲವು ತಿಂಗಳುಗಳಿಂದ ಈ ಒಂಟಿ ಸಲಗ ಕೊಳ್ತಿಗೆ ಭಾಗದಿಂದ ಹಿಡಿದು ಈ ಕಡೆ ಉಪ್ಪಿನಂಗಡಿ ಬೆಳ್ಳಿಪ್ಪಾಡಿ ತನಕ ಹೆಜ್ಜೆ ಹಾಕಿ ಬೆಳ್ಳಿಪ್ಪಾಡಿ ಭಾಗದಿಂದ ತನ್ನ ಜೊತೆಗಾತಿ ಆನೆಯೊಂದರ ಜೊತೆ ಮತ್ತೆ ಸ್ವಸ್ಥಾನಕ್ಕೆ ಸೇರಿಕೊಂಡಿತ್ತು. ಇದೀಗ ಮತ್ತೆ ಒಂಟಿಯಾಗಿ ಹೆಜ್ಜೆ ಹಾಕಲು ಆರಂಭಿಸಿದೆ.