Connect with us

BELTHANGADI

ಮತಗಟ್ಟೆ ವೀಕ್ಷಣೆಗೆ ತೆರಳಿದ ಅಧಿಕಾರಿಗಳಿಗೆ ಎದುರಾದ ಒಂಟಿ ಸಲಗ

ಬೆಳ್ತಂಗಡಿ ಡಿಸೆಂಬರ್ 12: ರಾಜ್ಯದೆಲ್ಲೆಡೆ ಗ್ರಾಮಪಂಚಾಯತ್ ಚುನಾವಣೆಗೆ ಸಕಲ ಸಿದ್ಧತಗಳನ್ನು ನಡೆಸಲಾಗುತ್ತಿದೆ. ಹೀಗೆ ಚುನಾವಣೆಯ‌ ಸಿದ್ಧತೆ ನೆರವೇರಿಸಲು ಹೊರಟ ಅಧಿಕಾರಿಗಳ ತಂಡವೊಂದಕ್ಕೆ ಒಂಟಿ ಸಲಗವೊಂದು ಎದುರಾಗಿ ಸ್ವಾಗತ ಕೋರಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಾಂಜಾರು ಮಲೆ ಎಂಬಲ್ಲಿ ನಡೆಸಿದೆ.


ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಚುನಾವಣೆಯ ಮತಗಟ್ಟೆ ಪರಿಶೀಲನೆಗೆ ತೆರಳಿದ ಅಧಿಕಾರಿಗಳು‌ ಒಂಟಿ‌ ಸಲಗವನ್ನು ಕಂಡು‌ ತಬ್ಬಿಬ್ಬಾಗಿದ್ದಾರೆ. ಬೆಳ್ತಂಗಡಿ ತಾಲೂಕು ಕೇಂದ್ರದಿಂದ 35 ಕಿಮೀ ದೂರದಲ್ಲಿರುವ ಬಾಂಜಾರುಮಲೆ ಪ್ರದೇಶವು ನೆರಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುತ್ತಿದ್ದು, ಕಾಡಿನಿಂದ ಆವೃತ್ತವಾಗಿರುವ ಈ ಪ್ರದೇಶದಲ್ಲಿ ಸುಮಾರು 45 ಮನೆಗಳ 260 ರಷ್ಟು ಮತದಾರರಿದ್ದಾರೆ. ಈ ಮತದಾರರಿಗೆ ಬಾಂಜಾರುಮಲೆ ಸಮುದಾಯಭವನದಲ್ಲಿ ಮತಗಟ್ಟೆ ಸಂಖ್ಯೆ 86ರಲ್ಲಿ ಅವಕಾಶಮಾಡಿಕೊಡಲಾಗುತ್ತದೆ.


ಇದರ ಪರಿಶೀಲನೆಗಾಗಿ ಚುನಾವಣಾಧಿಕಾರಿ ರಘು, ಸಹಾಯಕ ಚುನಾವಣಾಧಿಕಾರಿ ಅಜಿತ್, ನೆರಿಯ ಗ್ರಾ.ಪಂ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಾಯತ್ರಿ ಪಿ. ಹಾಗೂ ಸಿಬಂದಿಗಳು ಬಾಡಿಗೆ ವಾಹನ ಮೂಲಕ ತೆರಳಿದ್ದರು. ಮಧ್ಯಾಹ್ನ 1.35 ಕ್ಕೆ ಹೊರಟು ವಾಪಾಸಾಗುತ್ತಿದ್ದಾಗ, ಏನೆಪೋಯ ವಿದ್ಯುತ್ ಘಟಕದ ಡ್ಯಾಂ ಬಳಿ ಒಂಟಿ ಸಲಗ ಎದುರಾಗಿದೆ.


ಒಂಟಿ ಸಲಗ ಕಂಡು ಸಮೀಪದ ಕಿರು ರಸ್ತೆಯಲ್ಲಿ ಚಾಲಕ ವಾಹನನ್ನು ತಿರುವು ಹಾಕಿದ್ದರು. ಸುಮಾರು 2.15ರಿಂದ 3.15 ರವರೆಗೆ ಆನೆ ಹಾದುಹೋಗುವವರೆಗೆ ಸ್ಥಳದಲ್ಲೇ ಅಧಿಕಾರಿಗಳು ಉಳಿಯುವಂತಾಗಿತ್ತು. ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಸರ್ವೇ ಸಾಮಾನ್ಯವಾಗಿದ್ದು, ಈ ಭಾಗದ ಜನ ಆನೆಗಳ ಜೊತೆಗೇ ಜೀವನ ಸಾಗಿಸುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಅಲ್ಲದೆ ದಟ್ಟ ಕಾನನದ ನಡುವೆ ಜಲ ವಿದ್ಯುತ್ ಘಟಕಗಳಂತಹ ನಿರ್ಮಾಣಗಳನ್ನು ಮಾಡಿ ಕಾಡುಪ್ರಾಣಿಗಳಿಗೆ ತೊಂದರೆ ನೀಡುವ ಪ್ರಯತ್ನಗಳೂ ನಡೆಯುತ್ತಿವೆ. ಡ್ಯಾಂಗಳನ್ನು ನಿರ್ಮಿಸುತ್ತಿರುವುದರಿಂದ ಆನೆಗಳಿಗೆ ನೀರಿನ ಸಮಸ್ಯೆಯಿಂದಾಗಿ ಜನವಸತಿ ಪ್ರದೇಶಗಳ ಕಡೆಗೆ ಬರುತ್ತಿರುವುದು ಹೆಚ್ಚಾಗುತ್ತಿದೆ. ಕಾಡಾನೆಗಳ ಹಾವಳಿ ಬಗ್ಗೆ ಕೇವಲ ಗ್ರಾಮಸ್ಥರಿಂದ ಮನವಿ ಸ್ವೀಕರಿಸಿದ್ದ ಅಧಿಕಾರಿಗಳಿಗೆ ಒಂಟಿ ಸಲಗ ತನ್ನ ಇರುವಿಕೆಯನ್ನು ಅಧಿಕಾರಿಗಳ ಮುಂದೆಯೇ ಖಚಿತಪಡಿಸಿದೆ.

Facebook Comments

comments