BELTHANGADI
ಅರಸಿನಮಕ್ಕಿಯ ತಾಳಮದ್ದಳೆಯಲ್ಲಿ ಹಸ್ತಿನಾವತಿ ಎಂದಾಗ ಹಸ್ತಿ ಪ್ರತ್ಯಕ್ಷ : ಭಯದಿಂದ ಓಟಕ್ಕಿತ್ತ ಪ್ರೇಕ್ಷಕರು
ಅರಸಿನಮಕ್ಕಿಯ ತಾಳಮದ್ದಳೆಯಲ್ಲಿ ಹಸ್ತಿನಾವತಿ ಎಂದಾಗ ಹಸ್ತಿ ಪ್ರತ್ಯಕ್ಷ : ಭಯದಿಂದ ಓಟಕ್ಕಿತ್ತ ಪ್ರೇಕ್ಷಕರು
ಪುತ್ತೂರು, ಜನವರಿ 08 : ಬೆಳ್ತಂಗಡಿ ತಾಲೂಕಿನ ಅರಸಿಮಕ್ಕಿಯ ಹತ್ಯಡ್ಕದಲ್ಲಿ ಯಕ್ಷಗಾನ ತಾಳಮದ್ದಲೆ ಸಂದರ್ಭದಲ್ಲಿ ಕಾಡಾನೆ ದರ್ಶನವಾಗಿದೆ.
ಸ್ಥಳೀಯ ಉದ್ಯಮಿ ಸುಧೀರ್ ಕುಮಾರ್ ಅವರು ತಮ್ಮ ಮನೆಯಲ್ಲಿ ರವಿವಾರ ಮಧ್ಯಾಹ್ನ ಸತ್ಯನಾರಾಯಣ ಪೂಜೆ ಹಾಗೂ ಮಧ್ಯಾಹ್ನದ ಅನಂತರ ಮನೆಯಂಗಳದಲ್ಲಿಯೇ ಸುಭದ್ರಾರ್ಜುನ ತಾಳಮದ್ದಳೆಯನ್ನು ಏರ್ಪಡಿಸಿದ್ದರು.
ಅಪರಾಹ್ನ 3. 30 ಗಂಟೆ ಸುಮಾರಿಗೆ ತಾಳಮದ್ದಳೆಯು ಆರಂಭವಾಯಿತು.
ತಾಳಮದ್ದಳೆ ಪ್ರಾರಂಭವಾಗಿ ಸತ್ಯಭಾಮೆ ಹಾಗೂ ಶ್ರೀಕೃಷ್ಣನ ಸಂವಾದ ನಡೆಯುತ್ತಿತ್ತು.
ಹಸ್ತಿನಾವತಿಯ ರಾಜ ಕೌರವನಿಗೆ ಸುಭದ್ರೆಯನ್ನು ನೀಡಿ ವಿವಾಹ ಮಾಡಿಸುವ ಕುರಿತು ಬಲರಾಮನು ಯೋಚಿಸುತ್ತಿರುವ ಬಗ್ಗೆ ಶ್ರೀಕೃಷ್ಣನಲ್ಲಿ ತಿಳಿಸುತ್ತಿದ್ದಳು.
ಕಾವ್ಯಶ್ರೀ ಅಜೇರು ಇವರ ಭಾಗವತಿಕೆಯಲ್ಲಿ ಹರೀಶ್ ಬೊಳಂತಿಮೊಗರು ಹಾಗೂ ಶೇಣಿ ಬಾಲಮುರಳಿಯವರು ಅರ್ಥವನ್ನು ನುಡಿಯುತ್ತಿದ್ದರು.
ಸಾಕಷ್ಟು ಸಂಖ್ಯೆಯಲ್ಲಿದ್ದ ಯಕ್ಷಗಾನಾಸಕ್ತರು ತಾಳಮದ್ದಳೆಯನ್ನು ಆಸ್ವಾದಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಹಸ್ತಿನಾವತಿಯ ರಾಜನಿಗೆ ಮದುವೆ ಮಾಡಿಕೊಡಬಾರದು ಎಂದು ಸತ್ಯಭಾಮೆ ನುಡಿಯುತ್ತಿದ್ದ ಸಂದರ್ಭದಲ್ಲೆ ದಿಢೀರನೆ ಅವರ ಮನೆಯ ಅಂಗಳದಲ್ಲಿ ವಾಹನಗಳ ನಿಲುಗಡೆಯ ಜಾಗದಲ್ಲಿ ಹಸ್ತಿ ಪ್ರತ್ಯಕ್ಷವಾಗಿದೆ.
ಮನೆಯ ಯಜಮಾನರು ಹಾಗೂ ಹತ್ತಿರದಲ್ಲಿದ್ದವರು ಕಂಪೌಂಡ್‌ನೊಳಗೆ ಗಾಬರಿಯಿಂದ ಬಂದಿದ್ದು ಆ ಸಂದರ್ಭದಲ್ಲಿ ವಾಹನವನ್ನು ಪಾರ್ಕ್ ಮಾಡಲು ಬಂದವರು ಕೂಡ ಭೀತಿಯಿಂದ ಅಂಗಳದೊಳಕ್ಕೆ ಬಂದಿದ್ದಾರೆ.
ಅನೇಕರು ಹಠಾತ್ ಪ್ರತ್ಯಕ್ಷವಾದ ಆನೆಯನ್ನು ಕಂಡು ಭೀತಿಗೊಳಗಾಗಿ ಓಟಕ್ಕಿತ್ತರು. ಸಾಕಷ್ಟು ವಾಹನ, ಜನರ ಗೊಂದಲ ಕಂಡ ಆನೆಯು ಮನೆಯ ಹಿತ್ತಲಿನಿಂದ ತೋಟಕ್ಕೆ ಹೋಗಿ ಕಾಡನ್ನು ಸೇರಿಕೊಂಡಿದೆ.
ಗಜ ಪುರಾಣದಿಂದಾಗಿ ಸುಮಾರು ಅರ್ಧ ಗಂಟೆಗಳ ಕಾಲ ತಾಳಮದ್ದಳೆಯನ್ನು ನಿಲ್ಲಿಸಿ ಅನಂತರ ಮುಂದುವರಿಸಲಾಯಿತು.