DAKSHINA KANNADA
ಗಂಡ ಹೆಂಡತಿ ಜಗಳ -ಹೆಂಡತಿ ಸಾವಿನಲ್ಲಿ ಅಂತ್ಯ
ವಿಟ್ಲ ಡಿಸೆಂಬರ್ 13: ಕುಡಿದು ಬಂದು ಹೆಂಡತಿ ಜೊತೆ ಗಲಾಟೆ ಮಾಡುವ ವೇಳೆ ಗಂಡ ಹೆಂಡತಿಯನ್ನು ದೂಡಿದ ಪರಿಣಾಮ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ. ವಿಟ್ಲ ಸಮೀಪದ ಪುಣಚದಲ್ಲಿ ಈ ಘಟನೆ ನಡೆದಿದೆ. ಮೃತ ಮಹಿಳೆಯನ್ನು ದೇವಿನಗರ ನಿವಾಸಿ ಲೀಲಾ (45) ಎಂದು ಗುರುತಿಸಲಾಗಿದೆ.
ಗಂಡ ಸಂಜೀವ ಪ್ರತಿದಿನ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಎಂದು ಹೇಳಲಾಗಿದೆ. ಅದೇ ರೀತಿ ಮೊನ್ನೆ ಕೂಡ ಗಲಾಟೆ ಮಾಡಿ ಹೆಂಡತಿಯನ್ನು ದೂಡಿ ಹಾಕಿದ್ದಾನೆ ಎಂಬ ಮಾಹಿತಿ ಸಾರ್ವಜನಿಕರಿಂದ ತಿಳಿದು ಬಂದಿದೆ. ಮಾಹಿತಿ ತಿಳಿದ ಸ್ಥಳೀಯರು ಕೂಡಲೇ ಮಹಿಳೆಯನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ರವಾನಿಸಿದ್ದಾರೆ. ಇದೀಗ ಗುರುವಾರ ಮುಂಜಾನೆ ಲೀಲಾರವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ವಿಟ್ಲ ಪೋಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.