LATEST NEWS
ಪ್ರಾಣವನ್ನು ಪಣಕ್ಕಿಟ್ಟು ಮಗುವಿನ ರಕ್ಷಣೆ ಮಾಡಿದ ರೈಲ್ವೆ ಸಿಬ್ಬಂದಿ

ಮುಂಬೈ ಎಪ್ರಿಲ್ 19: ರೈಲ್ವೆ ಫ್ಲಾಟ್‌ಫಾರ್ಮ್‌ನಲ್ಲಿ ನಡೆದುಕೊಂಡು ಹೋಗುವಾಗ ಆಯತಪ್ಪಿ ಬಿದ್ದ ಮಗುವೊಂದನ್ನು ಇನ್ನೇನು ರೈಲು ಬಂದೇ ಬಿಟ್ಟಿತು ಎನ್ನುವಷ್ಟರಲ್ಲಿ ರೈಲ್ವೆ ಸಿಬ್ಬಂದಿ ಜೀವ ಉಳಿಸಿದ ಘಟನೆಯು ಮುಂಬೈ ವಿಭಾಗದ ರೈಲ್ವೆ ನಿಲ್ದಾಣವೊಂದರಲ್ಲಿ ನಡೆದಿದೆ. ಘಟನೆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಂಗಾನಿ ರೈಲ್ವೆ ಸ್ಟೇಷನ್‌ನ ಫ್ಲಾಟ್‌ಫಾರ್ಮ್ ನಂಬರ್ 2ರಲ್ಲಿ ತನ್ನ ತಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಮಗುವೊಂದು ಸಮತೋಲನ ಕಳೆದುಕೊಂಡು ರೈಲ್ವೆ ಹಳಿ ಮೇಲೆ ಬಿದ್ದಿದೆ. ಆಗ ಮುಂಬೈ ವಿಭಾಗದ ಮಯೂರ್ ಶೆಲ್ಖೆ ಅವರು ಅದೇ ಟ್ರ್ಯಾಕ್ ನಲ್ಲಿ ವೇಗದಿಂದ ರೈಲು ಬರುತ್ತಿದ್ದರೂ ಲೆಕ್ಕಿಸದೇ ಮಗುವನ್ನು ರಕ್ಷಿಸುವ ಮೂಲಕ ಸಾಹಸ ಮೆರೆದಿದ್ದಾರೆ.

ಈ ಘಟನೆಯ ವಿಡಿಯೊವನ್ನು ಟ್ವಿಟರ್ ನಲ್ಲಿ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಟ್ವೀಟ್ ಮಾಡಿ, ಅಸಾಧಾರಣ ಧೈರ್ಯಶಾಲಿ ಕಾರ್ಯವನ್ನು ಮಾಡಿದ ಮುಂಬೈನ ವಂಗಾನಿ ರೈಲ್ವೆ ನಿಲ್ದಾಣದ ರೈಲ್ವೆಮ್ಯಾನ್ ಮಯೂರ್ ಶೆಲ್ಖೆ ಅವರ ಬಗ್ಗೆ ತುಂಬಾ ಹೆಮ್ಮೆಯಾಗುತ್ತಿದೆ. ಅವರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ ಮತ್ತು ಮಗುವಿನ ಜೀವವನ್ನು ಉಳಿಸಿದ್ದಾರೆ ಎಂದು ಗೋಯಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.