KARNATAKA
ಇನ್ನೇನು ತಾಳಿಕಟ್ಟಬೇಕು ಮದುವೆ ಬೇಡ ಎಂದು ಎಸ್ಕೇಪ್ ಆದ ಮದುಮಗಳು

ಹಾಸನ ಮೇ 23: ಇನ್ನೇನು ವರ ವಧುವಿನ ಕುತ್ತಿಗೆಗೆ ತಾಳಿ ಕಟ್ಟಬೇಕು ಆ ಕ್ಷಣದಲ್ಲೇ ನನಗೆ ಮದುವೆ ಬೇಡೆ ಎಂದು ವಧು ಮದುವೆ ನಿರಾಕರಿಸಿದ ಘಟನೆ ಹಾಸನದಲ್ಲಿ ನಡೆದಿದೆ.
ಮಂತ್ರಘೋಷಗಳು, ಗಟ್ಟಿ ಮೇಳ ಮೊಳಗುತ್ತಿದ್ದಂತೆ ವರ ತಾಳಿ ಹಿಡಿದು ಕಟ್ಟಲು ಸಜ್ಜಾಗಿದ್ದರು. ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ‘ಈ ಮದುವೆ ಬೇಡ’ ಎಂದ ವಧು ಪಟ್ಟು ಹಿಡಿದರು. ತಾಳಿ ಕಟ್ಟುವ ಕೆಲವೇ ಕ್ಷಣಗಳ ಮೊದಲು ಪ್ರಿಯಕರನ ಮೊಬೈಲ್ ಕರೆ ಬಂದಿದ್ದು, ವಧು ಮದುವೆಗೆ ನಿರಾಕರಿಸಿದರು.

ಈ ವೇಳೆ ‘ನಿಜವಾಗಿಯೂ ಮದುವೆ ಇಷ್ಟವಿದೆಯಾ’ ಎಂದು ವರ ಕೂಡ ಹಲವಾರು ಬಾರಿ ಪ್ರಶ್ನಿಸಿದ್ದಾರೆ. ಆದರೆ, ತನಗೆ ಮದುವೆ ಇಷ್ಟವಿಲ್ಲ ಎಂದು ಮದುಮಗಳು ಹೇಳಿದ್ದಾರೆ. ಹುಡುಗಿಯ ಪೋಷಕರು, ಬೆದರಿಸಿ ಮದುವೆ ಮಾಡುವ ಪ್ರಯತ್ನ ಮಾಡಿದ್ದಾರೆ. ಆಗ, ‘ನಾನು ಬೇರೊಬ್ಬ ಹುಡುಗನ ಪ್ರೀತಿಸುತ್ತಿರುವುದಾಗಿ’ ಮದುಮಗಳು ಹೇಳಿದ್ದಾಳೆ.
ಮದುವೆ ಬೇಡ ಎಂದು ಹಸಮಣೆಯಿಂದ ಎದ್ದ ವಧು ನೇರವಾಗಿ ಕಲ್ಯಾಣ ಮಂಟಪದಿಂದ ಕಾರಿನ ಮೂಲಕ ಹೊರಗೆ ತೆರಳಿದ್ದಾರೆ. ಎರಡೂ ಕುಟುಂಬಗಳ ನಡುವೆ ಗಲಾಟೆ ನಡೆದಿದ್ದು, ಬಡಾವಣೆ ಹಾಗೂ ನಗರಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.