LATEST NEWS
ಗ್ರೆನೇಡ್, ರೈಫಲ್ ಗಳಿದ್ದ ಪಾಕ್ ಡ್ರೋನ್ ಬಿಎಸ್ಎಫ್ ವಶಕ್ಕೆ

ನವದೆಹಲಿ, ಜೂನ್ 20, ಗ್ರೆನೇಡ್, ರೈಫಲ್ ಗಳನ್ನು ಇಟ್ಟು ಜಮ್ಮು ಕಾಶ್ಮೀರದ ಗಡಿಯ ಒಳಭಾಗಕ್ಕೆ ಕಳಿಸಿದ್ದ ಪಾಕಿಸ್ಥಾನದ ಗೂಢಚಾರಿ ಡ್ರೋಣ್ ಒಂದನ್ನು ಬಿಎಸ್ಎಫ್ ಯೋಧರು ಹೊಡೆದುರುಳಿಸಿದ್ದಾರೆ. ಭಾರತ- ಪಾಕಿಸ್ಥಾನ ಗಡಿಭಾಗದ ಕಥುವಾ ಜಿಲ್ಲೆಯ ಹೀರಾನಗರ್ ಎಂಬಲ್ಲಿ ಬೆಳಗ್ಗೆ 5 ಗಂಟೆ ಸುಮಾರಿಗೆ ಅತ್ಯಾಧುನಿಕ ಡ್ರೋಣ್ ಕಾಣಿಸಿಕೊಂಡಿದ್ದು, ಯೋಧರು 8ರಿಂದ 9 ಸುತ್ತು ಗುಂಡು ಹಾರಿಸಿ ಅದನ್ನು ಸುರಕ್ಷಿತವಾಗಿ ಕೆಳಕ್ಕೆ ಇಳಿಸಿದ್ದಾರೆ.
ಗಡಿಭಾಗದ ರಥುವಾ ಗ್ರಾಮದಲ್ಲಿ ಗಡಿಯಿಂದ 250 ಮೀಟರ್ ಒಳಭಾಗಕ್ಕೆ ಬಂದಿದ್ದ ಈ ಡ್ರೋಣ್ ನ್ನು ಯೋಧರು ಪರಿಶೀಲನೆ ನಡೆಸಿದಾಗ ಅದರಲ್ಲಿ ಗ್ರೆನೇಡ್, ರೈಫಲ್ ಗಳು ಪತ್ತೆಯಾಗಿವೆ.

ಎಂ- 67 ಮಾದರಿಯ ಏಳು ಗ್ರೆನೇಡ್, ಐಎಂ – 04 ಅಮೆರಿಕ ನಿರ್ಮಿತ ಕಾರ್ಬೈನ್ ಮೆಷಿನ್ ರೈಫಲ್ ಗಳು, 60 ಬುಲೆಟ್ ಗಳು ಪತ್ತೆಯಾಗಿದ್ದು, ಅವನ್ನು ಯೋಧರು ವಶಕ್ಕೆ ಪಡೆದುಕೊಂಡಿದ್ದಾರೆ. ಆನಂತ್ರ 8.30ರ ಸುಮಾರಿಗೆ ಗಡಿಭಾಗದ ರಥುವಾ ಗ್ರಾಮದಲ್ಲಿ ಪಾಕಿಸ್ಥಾನಿ ಸೈನಿಕರು ಅಪ್ರಚೋದಿತ ದಾಳಿ ನಡೆಸಿದ್ದಾರೆಂದು ಸೇನಾ ಮೂಲಗಳು ತಿಳಿಸಿವೆ.
ಡ್ರೋಣ್ ನಲ್ಲಿದ್ದ ಮದ್ದುಗುಂಡುಗಳನ್ನು ಭಾರತೀಯ ಯೋಧರು ವಶಕ್ಕೆ ಪಡೆದಿದ್ದಕ್ಕೆ ಪ್ರತಿಯಾಗಿ ಈ ಪಾಕಿಸ್ಥಾನದ ಕಡೆಯಿಂದ ದಾಳಿ ನಡೆದಿರಬಹುದು ಎನ್ನಲಾಗುತ್ತಿದೆ.