DAKSHINA KANNADA
ಕಟೀಲು ಮೇಳದಿಂದ ಉದ್ಧೇಶಪೂರ್ವಕವಾಗಿ ಹೊರಬಂದರೇ ಸತೀಶ್ ಪಟ್ಲ ?
ಮಂಗಳೂಕಟೀಲು ಮೇಳದಿಂದ ಉದ್ಧೇಶಪೂರ್ವಕವಾಗಿ ಹೊರಬಂದರೇ ಸತೀಶ್ ಪಟ್ಲ ?
ಮಂಗಳೂರು, ನವಂಬರ್ 23: ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದ ಹೆಸರಾಂತ ಭಾಗವತರಾದ ಸತೀಶ್ ಶೆಟ್ಟಿ ಪಟ್ಲರನ್ನು ಯಕ್ಷಗಾನ ನಡೆಯುತ್ತಿದ್ದ ಸಮಯದಲ್ಲೇ ರಂಗಸ್ಥಳದಿಂದಲೇ ಹೊರ ನಡೆಯುವಂತೆ ಕಟೀಲು ಯಕ್ಷಗಾನದ ಯಜಮಾನರು ಮಾಡಿದ್ದಾರೆ ಎನ್ನುವ ವಿಚಾರ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
ಕಟೀಲು ಮೇಳದ ಐದು, ಆರು ಹಾಗೂ ಎರಡನೇ ಮೇಳದಲ್ಲಿ ಭಾಗವತಿಕೆ ಮಾಡಿಕೊಂಡಿದ್ದ ಸತೀಶ್ ಪಟ್ಲರ ವಿರುದ್ಧ ಯಕ್ಷಗಾನ ಮೇಳ ನಡೆಸುತ್ತಿರುವ ಯಜಮಾನರಿಗೆ ಅಸಮಾಧಾನವಿತ್ತು.
ಅಲ್ಲದೆ ಸತೀಶ್ ಪಟ್ಲ ಅಣತಿಯ ಮೇರೆಗೆ ಕಟೀಲು ಮೇಳದ ಮಾಜಿ ಕಲಾವಿದರು ಯಕ್ಷಗಾನ ಮೇಳದ ಹರಾಜು ಪ್ರಕ್ರಿಯೆಯ ವಿಚಾರದಲ್ಲಿ ಕೋರ್ಟ್ ಮೆಟ್ಟಿಲನ್ನೂ ಏರಿದ್ದರು ಎನ್ನುವ ಮಾತುಗಳೂ ಕೇಳಿ ಬರುತ್ತಿತ್ತು.
ಈ ಎಲ್ಲಾ ವಿಚಾರಗಳಿಂದಾಗಿ ಇತ್ತೀಚಿನ ಕೆಲವು ವರ್ಷಗಳಿಂದ ಸತೀಶ್ ಪಟ್ಲ ಹಾಗೂ ಯಕ್ಷಗಾನದ ಯಜಮಾನಿಕೆ ನಡೆಸುತ್ತಿರುವ ವ್ಯಕ್ತಿಗಳ ನಡುವೆ ಅಸಮಾಧಾನದ ಹೊಗೆಯಾಡುತ್ತಿತ್ತು.
ಅಲ್ಲದೆ ಇವರ ನಡುವೆ ಮುಸುಕಿನ ಗುದ್ದಾಟಗಳೂ ನಡೆಯುತ್ತಿದ್ದವು. ಈ ನಡುವೆ ಕಟೀಲು ಮೇಳದ ತಿರುಗಾಟ ನಿನ್ನೆಯಿಂದ ಆರಂಭಗೊಳ್ಳುವ ಹಿನ್ನಲೆಯಲ್ಲಿ ಕಟೀಲು ಕ್ಷೇತ್ರದ ಆವರಣದಲ್ಲಿ ಎಲ್ಲಾ ಮೇಳಗಳ ಗೆಜ್ಜೆಪೂಜೆ ನೆರವೇರಿತ್ತು.
ಈ ಸಂದರ್ಭದಲ್ಲಿ ಭಾಗವತಿಕೆ ನಡೆಸುತ್ತಿದ್ದ ಸತೀಶ್ ಪಟ್ಲರನ್ನು ಏಕಾಏಕಿ ರಂಗಸ್ಥಳದಿಂದ ಹೊರ ನಡೆಯುವಂತೆ ಯಕ್ಷಗಾನ ಮೇಳದ ಯಜಮಾನರು ಸೂಚನೆ ನೀಡಿದ್ದರು.
ಮೂಲಗಳ ಪ್ರಕಾರ ನಿನ್ನೆಯ ಯಕ್ಷಗಾನ ಮೇಳಕ್ಕೆ ಬರುವಂತೆ ಸತೀಶ್ ಪಟ್ಲರಿಗೆ ಮೇಳದ ವತಿಯಿಂದ ಆಹ್ವಾನವನ್ನೇ ನೀಡಿರಲಿಲ್ಲ.
ಯಕ್ಷಗಾನ ಮೇಳದಿಂದ ಯಾವುದೇ ಸೂಚನೆ ದೊರಕದೆ ಮೇಳದಲ್ಲಿ ಭಾಗವಹಿಸಿದ ಪಟ್ಲರ ವಿರುದ್ಧ ಮೇಳದ ಯಜಮಾನ ಆಕ್ಷೇಪ ವ್ಯಕ್ತಪಡಿಸಿ ರಂಗಸ್ಥಳದಿಂದ ಹೊರ ನಡೆಯುವಂತೆ ಸೂಚಿಸಿದ್ದಾರೆ.
ಅಲ್ಲದೆ ಅವರನ್ನು ಯಕ್ಷಗಾನ ಮೇಳದಿಂದ ತೆಗೆಯಲಾಗಿದೆ ಎನ್ನುವುದನ್ನೂ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಈ ಹಿಂದೆಯೇ ಸತೀಶ ಪಟ್ಲರಿಗೆ ಮೇಳದ ವತಿಯಿಂದ ಸೂಚನೆ ನೀಡಲಾಗಿದೆ ಎನ್ನಲಾಗಿದ್ದು, ನಿನ್ನೆ ನಡೆದ ಘಟನೆ ಸತೀಶ್ ಪಟ್ಲ ಉದ್ಧೇಶಪೂರ್ವಕವಾಗಿ ಸೃಷ್ಟಿಸಿದ ಅನುಕಂಪದ ನಾಟಕ ಎನ್ನುವ ಮಾತುಗಳೂ ಹರಿದಾಡಲಾರಂಭಿಸಿದೆ.
ಕಟೀಲು ಯಕ್ಷಗಾನ ಮೇಳವನ್ನು ಬಿಡುವ ಬಗ್ಗೆ ಸತೀಶ್ ಪಟ್ಲ ಈಗಾಗಲೇ ತಯಾರಿ ನಡೆಸಿದ್ದು, ಒಡಿಯೂರು ಸಂಸ್ಥಾನದ ಸ್ವಾಮೀಜಿಗಳ ಜೊತೆ ಸೇರಿ ಹೊಸದೊಂದು ಯಕ್ಷಗಾನ ಮೇಳವನ್ನು ಆರಂಭಿಸುವ ಯೋಜನೆಯನ್ನೂ ಹಾಕಿಕೊಂಡಿದ್ದರು ಎನ್ನಲಾಗಿದೆ.
ಈ ನಡುವೆ ತಾವೇ ಕಟೀಲು ಮೇಳ ಬಿಡುವ ಬದಲು , ತಮ್ಮನ್ನು ಒತ್ತಾಯಪೂರ್ವಕವಾಗಿ ಮೇಳದಿಂದ ಬಿಡಿಸಿದರು ಎನ್ನುವ ಅನುಕಂಪ ಸಮಾಜದಲ್ಲಿ ಮೂಡಿಬರಲಿ ಎನ್ನುವ ಕಾರಣಕ್ಕಾಗಿಯೇ ಸತೀಶ್ ಪಟ್ಲ ನಿನ್ನೆಯ ದಿನ ಉದ್ಧೇಶಪೂರ್ವಕವಾಗಿಯೇ ಭಾಗವತಿಕೆಗೆ ತೆರಳಿದ್ದರು ಎನ್ನುವ ವಿಚಾರ ಇದೀಗ ಬೆಳಕಿಗೆ ಬಂದಿದೆ.