LATEST NEWS
ಕೂಳೂರು ಹಳೆಯ ಸೇತುವೆಯಲ್ಲಿ ಸಂಚಾರ ನಿರ್ಬಂಧಿಸಿದರೆ ತೀವ್ರ ಹೋರಾಟ : ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಎಚ್ಚರಿಕೆ
ಕೂಳೂರು ಹಳೆಯ ಸೇತುವೆಯಲ್ಲಿ ಸಂಚಾರ ನಿರ್ಬಂಧಿಸಿದರೆ ತೀವ್ರ ಹೋರಾಟ : ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಎಚ್ಚರಿಕೆ
ಮಂಗಳೂರು ಜೂನ್ 6: ಮಂಗಳೂರು ಉಡುಪಿ ಸಂಪರ್ಕಿಸುವ ಕೂಳೂರು ಹಳೆ ಸೇತುವೆಯಲ್ಲಿ ಭಾರಿ ಗಾತ್ರದ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದು, ಈ ಆದೇಶ ವಿರುದ್ದ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಎಚ್ಚರಿಕೆ ನೀಡಿದ್ದು ಸಂಚಾರ ನಿರ್ಬಂಧಿಸಿದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಕೂಳೂರು ಹಳೆಯ ಸೇತುವೆ ಸಂಚಾರಕ್ಕೆ ಅನರ್ಹಗೊಂಡಿರುವ ಕುರಿತು ವರ್ಷದ ಹಿಂದೆಯೇ ವರದಿ ಬಂದಿದ್ದರೂ, ಹೊಸ ಸೇತುವೆ ನಿರ್ಮಾಣಕ್ಕೆ ಈವರಗೆ ಯಾವ ಸಿದ್ದತೆಗಳನ್ನೂ ಮಾಡದೆ, ಪರ್ಯಾಯ ವ್ಯವಸ್ಥೆಗಳೂ ಇಲ್ಲದೆ ಈಗ ಏಕಾಏಕಿ ಹಳೆಯ ಸೇತುವೆಯಲ್ಲಿ ಪ್ರಯಾಣಿಕ ಸಾರಿಗೆ ಸಹಿತ ಘನವಾಹನಗಳಿಗೆ ನಿಷೇಧ ಹೇರಲು ನಿರ್ಧರಿಸಿರುವುದು ಖಂಡನೀಯ.
ಉಳಿದ ಒಂದೇ ಅಗಲ ಕಿರಿದಾದ ಸೇತುವೆಯಲ್ಲಿ ದ್ವಿಮುಖ ಸಂಚಾರದಿಂದ ಈ ಭಾಗದಲ್ಲಿ ವಾಹನ ದಟ್ಟನೆಯಿಂದ ಅರಾಜಕತೆ ಉಂಟಾಗಲಿದ್ದು ಮಂಗಳೂರು, ಸುರತ್ಕಲ್, ಉಡುಪಿ ಮಧ್ಯೆ ಹೆದ್ದಾರಿಯಲ್ಲಿ ಸಂಪರ್ಕವೇ ಕಡಿತಗೊಳ್ಳಲಿದೆ ಎಂದು “ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್” ಇದರ ಸಂಚಾಲಕ ಮುನೀರ್ ಕಾಟಿಪಳ್ಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹೊಸ ಸೇತುವೆ ನಿರ್ಮಾಣದ ನೀಲನಕ್ಷೆಯನ್ನೂ ಸಿದ್ದಪಡಿಸದೆ ಸೇತುವೆ ಮುಚ್ಚಲು ಹೊರಟಿರುವ ಹೆದ್ದಾರಿ ಪ್ರಾಧಿಕಾರ, ಜಿಲ್ಲಾಡಳಿತದ ಈ ಬೇಜವಾಬ್ದಾರಿ ನಡೆಯನ್ನು ಜನತೆ ಪ್ರಶ್ನಿಸದೇ ಮೌನವಹಿಸಿದರೆ ಕನಿಷ್ಟ ಒಂದು ದಶಕಗಳ ಕಾಲ ಈ ಭಾಗದಲ್ಲಿ ಪ್ರಯಾಣವೇ ಸಾಧ್ಯವಾಗದೆ ಚಿತ್ರಹಿಂಸೆಗೆ ಗುರಿಯಾಗಬೇಕಾಗುತ್ತದೆ.
ಮಂಗಳೂರು, ಸುರತ್ಕಲ್, ಉಡುಪಿ ಮಧ್ಯೆಯ ಸಂಚಾರದ ಅವ್ಯವಸ್ಥೆ ಅವಳಿ ಜಿಲ್ಲೆಗಳ ವ್ಯಾಪಾರ, ಉದ್ಯಮ, ಉದ್ಯೋಗ, ಶೈಕ್ಷಣಿಕ ವಲಯಗಳ ಮೇಲೂ ಗಂಭೀರ ಪರಿಣಾಮ ಬೀಳಲಿದ್ದು, ಜನತೆ ಪರಿತಪಿಸುವ ಸ್ಥಿತಿ ನಿರ್ಮಾಣವಾಗಲಿದೆ.
ಸಮಸ್ಯೆಗಳು ಏನೆ ಇದ್ದರೂ ಹೊಸ ಸೇತುವೆ ನಿರ್ಮಿಸದೆ, ಹಳೆಯ ಸೇತುವೆಯಲ್ಲಿ ಸಂಚಾರ ನಿರ್ಬಂಧವನ್ನು ಒಪ್ಪಲು ಸಾಧ್ಯವಿಲ್ಲ.
ಹೆದ್ದಾರಿ ಪ್ರಾಧಿಕಾರ, ರಾಜ್ಯ ಸರಕಾರ ಸಮರೋಪಾದಿ ಕಾಮಗಾರಿಯ ಮೂಲಕ ಕಾಲಮಿತಿಯೊಳಗಡೆ ಹೊಸ ಸೇತುವೆಯನ್ನು ಕೂಳೂರಿನಲ್ಲಿ ನಿರ್ಮಿಸಬೇಕು. ಅಲ್ಲಿಯವರಗೆ ಹಳೆ ಸೇತುವೆಯನ್ನು ಆಧುನಿಕ ತಂತ್ರಜ್ಞಾನವನ್ನು ಬಳಸಿ ತಾತ್ಕಾಲಿಕ ದುರಸ್ಥಿ ನಡೆಸಿ ಸಂಚಾರಕ್ಕೆ ಯೋಗ್ಯಗೊಳಿಸಬೇಕು.
ಅದಲ್ಲದೆ ಹಳೆ ಸೇತುವೆ ಮುಚ್ಚಲು ಹೊರಟು ಅರಾಜಕತೆ ಸೃಷ್ಟಿಸಲು ಮುಂದಾದರೆ ಜನಸಮೂಹವನ್ನು, ಸಂಘಟನೆಗಳನ್ನು ಜೊತೆ ಸೇರಿಸಿ “ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ” ನೇತೃತ್ವದಲ್ಲಿ ಪ್ರಬಲ ಹೋರಾಟವನ್ನು ಸಂಘಟಿಸಲಾಗುವುದು ಎಂದು ಮುನೀರ್ ಕಾಟಿಪಳ್ಳ ಹೆದ್ದಾರಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತವನ್ನು ಎಚ್ಚರಿಸಿದ್ದಾರೆ.