ಬಂಟ್ವಾಳ, ಮೇ 15: ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ಈಗಾಗಲೇ ಪ್ರಕಟಗೊಂಡಿದೆ.
ಅಧಿಕಾರದಲ್ಲಿದ್ದ ಕಾಂಗ್ರೇಸ್ ಪಕ್ಷ ಇದೀಗ ಅಧಿಕಾರ ಕಳೆದುಕೊಂಡಿದೆ. ಇದೀಗ ಜೆಡಿಎಸ್ ಪಕ್ಷದೊಂದಿಗೆ ಸೇರಿಕೊಂಡು ಮತ್ತೆ ಆಡಳಿತ ಹಿಡಿಯುವ ಪ್ರಯತ್ನದಲ್ಲೂ ಇದೆ.
ದಕ್ಷಿಣಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 7 ಕ್ಷೇತ್ರಗಳಲ್ಲಿ ಈ ಹಿಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೇಸ್ ಪಕ್ಷ ಈ ಬಾರಿ ಕೇವಲ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.
ಬಿಜೆಪಿ ಪಕ್ಷ ಈ ಬಾರಿ 7 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಒಂದು ಕ್ಷೇತ್ರವನ್ನು ಕಳೆದುಕೊಂಡಿದೆ.
ಚುನಾವಣೆ ಘೋಷಣೆಯಾದ ಬಳಿಕ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲೆಯ ಕಾಂಗ್ರೇಸ್ ಪಕ್ಷದ ಹಲವು ಮುಖಂಡರು ಕಾಂಗ್ರೇಸ್ ನ ಹಿರಿಯ ಮುಖಂಡ ಬಿ. ಜನಾರ್ಧನ ಪೂಜಾರಿಯವರ ಕಾಲು ಹಿಡಿದು ಆಶೀರ್ವಾದ ಪಡೆದಿದ್ದರು.
ಆ ಸಂದರ್ಭದಲ್ಲಿ ಜನಾರ್ಧನ ಪೂಜಾರಿ ತನ್ನ ಬಳಿಗೆ ಬಂದ ಎಲ್ಲಾ ಅಭ್ಯರ್ಥಿಗಳಿಗೆ ಶುಭಾಶಯಗಳನ್ನೂ ಹೇಳಿದ್ದರು.
ಮುಖ್ಯವಾಗಿ ಬಂಟ್ವಾಳ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ರಮಾನಾಥ ರೈ , ಮಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಜೆ.ಆರ್.ಲೋಬೋ, ಪುತ್ತೂರು ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಶಕುಂತಲಾ ಶೆಟ್ಟಿ, ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಮೊಯಿದೀನ್ ಬಾವಾ, ಮಂಗಳೂರು ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಯು.ಟಿ. ಖಾದರ್ , ಉಡುಪಿ ಕಾಪು ಕೇತ್ರದ ಕಾಂಗ್ರೇಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಪೂಜಾರಿಯವರ ಕಾಲು ಹಿಡಿದು ಆಶೀರ್ವಾದ ಪಡೆದಿದ್ದರು.
ಆದರೆ ಕಾಲು ಹಿಡಿದು ಆಶೀರ್ವಾದ ಪಡೆದ ಅಭ್ಯರ್ಥಿಗಳಲ್ಲಿ ಯು.ಟಿ.ಖಾದರ್ ಹೊರತುಪಡಿಸಿ ಉಳಿದೆಲ್ಲಾ ಅಭ್ಯರ್ಥಿಗಳು ಬಿಜೆಪಿ ವಿರುದ್ಧ ಹೀನಾಯವಾಗಿ ಸೋತಿದ್ದಾರೆ.
ಚುನಾವಣೆಗೆ ಮೊದಲು ಹಿರಿಯ ಕಾಂಗ್ರೇಸ್ ಮುಖಂಡರಾಗಿದ್ದ ಬಿ. ಜನಾರ್ಧನ ಪೂಜಾರಿಯವರನ್ನು ಹೀನಾಯವಾಗಿ ನಡೆಸಿಕೊಂಡಿದ್ದ ಕಾಂಗ್ರೇಸ್ ಮುಖಂಡರಿಗೆ ಚುನಾವಣೆ ಘೋಷಣೆಯಾದ ತಕ್ಷಣ ಪೂಜಾರಿಯವರ ಮೇಲೆ ಅಭಿಮಾನ ಉಕ್ಕಿ ಬಂದಿತ್ತು.
ಇದೇ ಕಾರಣಕ್ಕಾಗಿ ಪೂಜಾರಿಯವರ ಕಾಲು ಹಿಡಿಯಲು ಸರತಿ ಸಾಲಿನಲ್ಲಿ ನಿಂತಿದ್ದ ಅಭ್ಯರ್ಥಿಗಳ ಕಾಲನ್ನು ಮತದಾರನೇ ಎಳೆದು ಹಾಕಿದ್ದಾನೆ.
ಓಲೈಕೆ, ತುಷ್ಠೀಕರಣ, ತೋರ್ಪಡಿಕೆಯ ರಾಜಕಾರಣಕ್ಕೆ ಜಿಲ್ಲೆಯಲ್ಲಿ ಅವಕಾಶವಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ಮತದಾರ ಈ ಬಾರಿಯ ಚುನಾವಣೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಗೂ ನೀಡಿದ್ದಾನೆ.