BANTWAL
ವಿಟ್ಲ: ಗುಡ್ಡದಲ್ಲಿ ಮನುಷ್ಯನ ತಲೆ ಬುರುಡೆ, ಎಲುಬು ಪತ್ತೆ: ಗ್ರಾಮಸ್ಥರಲ್ಲಿ ಆತಂಕ
ಬಂಟ್ವಾಳ, ಆಗಸ್ಟ್ 09: ಗುಡ್ಡವೊಂದರಲ್ಲಿ ವ್ಯಕ್ತಿಯೋರ್ವರ ತಲೆ ಬುರುಡೆ, ಎಲುಬು ಹಾಗೂ ಬಟ್ಟೆ ಪತ್ತೆಯಾದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ನೆಕ್ಕರೆಕಾಡು ಎಂಬಲ್ಲಿ ನಡೆದಿದೆ.
ನಿನ್ನೆ (ಆ.8) ಸಾಯಂಕಾಲ ಗುಡ್ಡಕ್ಕೆ ಸೊಪ್ಪುತರಲೆಂದು ತೆರಳಿದ ಮಂದಿಗೆ ತಲೆಬುರುಡೆ, ಎಲುಬು ಹಾಗೂ ಆ ವ್ಯಕ್ತಿ ಧರಿಸಿರುವುದಾಗಿ ಸಂಶಯಿಸಲ್ಪಟ್ಟ ಬಟ್ಟೆ ಕಾಣಸಿಕ್ಕಿದೆ. ಬಳಿಕ ಅವರು ಮರಳಿಬಂದು ಮನೆಮಂದಿಗೆ ವಿಚಾರ ತಿಳಿಸಿದ್ದಾರೆ.
ರಾತ್ರಿ ವೇಳೆ ಅವರು ಈ ವಿಚಾರವನ್ನು ವಿಟ್ಲ ಠಾಣಾ ಪೊಲೀಸರಿಗೆ ತಿಳಿಸಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಿದೆ. ತಲೆಬುರುಡೆ ಪತ್ತೆಯಾದ ಪ್ರಕರಣ ನಾಗರೀಕರಲ್ಲಿ ವ್ಯಾಪಕ ಆತಂಕಕ್ಕೆ ಕಾರಣವಾಗಿದೆ.
You must be logged in to post a comment Login