DAKSHINA KANNADA
ಪ್ರಕೃತಿ ರಮಣೀಯ ಕೂಡ್ಲು ತೀರ್ಥ ಜಲಪಾತ ನೋಡ ಬನ್ನಿ
ಪ್ರಕೃತಿ ರಮಣೀಯ ಕೂಡ್ಲು ತೀರ್ಥ ಜಲಪಾತ ನೋಡ ಬನ್ನಿ
ನಗರ ಜೀವನದ ಜಂಜಾಟಗಳಿಂದ ದೂರವಾಗುವುದಕ್ಕೆ ಪ್ರೇಕ್ಷಣೀಯ ಸ್ಥಳಗಳಿಗೆ ತೆರಳುವುದು ಸಾಮಾನ್ಯ, ಆದರೆ ಚಾರಣವೆಂಬುದು ಸಾಹಸಿ ಪ್ರವೃತ್ತಿ, ಇದು ಯುವಕರನ್ನು ಅತಿಯಾಗಿ ಆಕರ್ಷಿಸುವಂತದ್ದು , ಚಾರಣ ಮುಗಿದ ಮೇಲೆ ಸಿಗುವ ಸಂತೋಷ, ಏನೋ ಸಾಧನೆ ಮಾಡಿದ ಅನುಭವ, ಮನಸ್ಸಿಗೆ ಮುದ ನೀಡುವ ಸಿಹಿ ನೆನಪುಗಳು ನಮ್ಮನ್ನು ಮತ್ತೆ ಮತ್ತೆ ಚಾರಣಕ್ಕೆ ಪ್ರೇರೇಪಿಸುತ್ತದೆ.
ಅಂತಹುದೇ ಪ್ರೇಕ್ಷಣೀಯ ಸ್ಥಳ ಕೂಡ್ಲು ತೀರ್ಥ ಜಲಪಾತ..
ಕೂಡ್ಲು ತೀರ್ಥ ಜಲಪಾತವು ಕರ್ನಾಟಕದ ಅತ್ಯಂತ ಪುರಾತನ ಹಾಗು ಸುಂದರ ಜಲಪಾತಗಳಲ್ಲಿ ಒಂದು.
ಉಡುಪಿ – ಆಗುಂಬೆ ರಸ್ತೆಯ ಹೆಬ್ರಿ ಬಳಿಯಿರುವ ಕೂಡ್ಲು ತೀರ್ಥ ಜಲಪಾತವು ನೋಡುಗರನ್ನು ಮೋಡಿ ಮಾಡುವ ಜಲಪಾತ ಎಂದೇ ಹೇಳಬಹುದು.
ಪಶ್ಚಿಮ ಘಟ್ಟಗಳ ದಟ್ಟವ ಕಾನನದ ಮಧ್ಯೆ ಹರಿಯುವ ಸೀತಾನದಿಯಿಂದ ಉಂಟಾಗಿರುವ ಈ ಕೂಡ್ಲು ತೀರ್ಥ ಜಲಪಾತ ನೋಡಲು ಅಷ್ಟೇ ರಮಣೀಯ..!!
ಕೂಡ್ಲು ತೀರ್ಥದ ವಿಶೇಷತೆ:
ಸುಮಾರು 300 ಅಡಿಗಳಷ್ಟು ಎತ್ತರದಿಂದ ಕೂಡ್ಲು ತೀರ್ಥ ಜಲಪಾತ ಧುಮುಕುತ್ತಿದೆ. ಈ ಹಿನ್ನೆಲೆಯಲ್ಲಿ ಜಲಪಾತದ ಕೆಳಗೆ ನೈಸರ್ಗಿಕವಾಗಿಯೇ ಕೊಳದ ರಚನೆಯಾಗಿದೆ.
ಪುರಾಣಗಳ ಪ್ರಕಾರ ಸುಮಾರು ಸಾವಿರ ವರ್ಷಗಳ ಹಿಂದೆ ಈ ಸ್ಥಳದಲ್ಲಿ ಸನ್ಯಾಸಿಗಳು ಧ್ಯಾನ ಮಾಡುತಿದ್ದರು ಎನ್ನುವ ಐತಿಹ್ಯವಿದೆ.
ಹಾಗಾಗಿ ಈ ಜಲಪಾತಕ್ಕೆ ಕೂಡ್ಲು ತೀರ್ಥ ಎನ್ನುವ ಹೆಸರು ಬಂದಿದೆ.
ಎತ್ತರದ ಬೆಟ್ಟದ ಮೇಲಿಂದ ಧುಮುಕುವ ಜಲಪಾತದ ಸೌಂದರ್ಯ ನೋಡುದೇ ಕಣ್ನಿಗೆ ಹಬ್ಬ.
ಧುಮುಕುವ ನೀರಿನ ಘರ್ಜನೆಯನ್ನು ಹೊರತುಪಡಿಸಿದರೆ ಈ ಸ್ಥಳ ತನ್ನ ಪ್ರಶಾಂತ ವಾತಾವರಣಕ್ಕೆ ಹೆಸರುವಾಸಿ.
ಆದ್ದರಿಂದಲೇ ಇದು ನಗರ ಜೀವನದ ಸದ್ದುಗದ್ದಲಗಳಿಂದ ದೂರವಿಡುವುದಲ್ಲದೆ ಪ್ರಕೃತಿಯನ್ನು ಸವಿಯುವಂತೆ ಮಾಡುತ್ತದೆ.
ಜಲಪಾತ ಧುಮುಕುವ ಸ್ಥಳವು ಆಳವಿಲ್ಲದ ಕಾರಣ ನಿರ್ಭಯವಾಗಿ ನೀರಿಗೆ ಇಳಿದು ಮೋಜು ಮಸ್ತಿ ಮಾಡಬಹುದು.
ಪ್ರವಾಸಿಗರು ಜಲಪಾತದ ಕೆಳಗೆ ನಿಂತು ಉಲ್ಲಾಸಕರ ಸ್ನಾನವನ್ನು ಆನಂದಿಸಬಹುದಾಗಿದೆ.
ಎತ್ತರದಿಂದ ಬೀಳುವ ನೀರಿನ ರಭಸಕ್ಕೆ ಸೂಜಿಯಿಂದ ಚುಚ್ಚಿದ ಅನುಭವ ನೀಡುತ್ತದೆ. ಆದರೂ ಎಚ್ಚರಿಕೆ ಅಗತ್ಯ.
ಚಾರಣ:
ದಟ್ಟಕಾಡಿನ ಮಧ್ಯೆ ಇರುವ ಈ ಕೂಡ್ಲು ತೀರ್ಥ ಜಲಪಾತವು ಪ್ರತ್ಯೇಕವಾದ ಸೌಂದರ್ಯದಿಂದಲೇ ಖ್ಯಾತಿ ಪಡೆದುಕೊಂಡಿದೆ.
ಅರಣ್ಯ ಇಲಾಖೆಗೆ ಸೇರಿದ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಚಾರಣಿಗರು ಅಥವಾ ಪ್ರವಾಸಿಗರು ಅನುಮತಿ ಮಾತ್ರ ಕಡ್ಡಾಯ.! ಚಾರಣಿಗರು ಅರಣ್ಯ ಇಲಾಖೆಯ ಕಛೇರಿಯಲ್ಲಿ ಪ್ರವೇಶ ಶುಲ್ಕವನ್ನು ಪಾವತಿಸಬೇಕು.
ಮಧ್ಯ, ಸಿಗರೇಟು ಹೀಗೆ ನಿಷೇಧಿತ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ. ಸ್ಪಷ್ಟ ಹೆಸರು, ದೂರವಾಣಿ ಮತ್ತು ತಮ್ಮಲ್ಲಿ ಇರುವ ವಸ್ತುಗಳ ಸಮಗ್ರ ಮಾಹಿತಿ ನೀಡಿ ಚಾರಣ ಮುಂದುವರಿಸ ಬೇಕು.
ಜಲಪಾತವನ್ನು ತಲುಪಲು ಸೀತಾನದಿಯನ್ನು ಹಾದುಹೋಗಬೇಕು.
ದಟ್ಟ ಕಾಡಿನ ಮಧ್ಯದಲ್ಲಿರುವ ಕಾಲುದಾರಿಯಲ್ಲಿ ಸುಮಾರು 1.5 ಕಿ ಮೀ ದೂರ ಸಾಗಬೇಕಾಗುತ್ತದೆ.
ಎತ್ತರ ತಗ್ಗಿನ ಭೂಪ್ರದೇಶವಾಗಿರುವ ಕಾರಣ ಹಾದಿ ಸ್ವಲ್ಪ ಕಠಿಣವೆನಿಸಿದರೂ ಜಲಪಾತ ಬಳಿ ತಲುಪಿದಾಗ ಆಗುವ ಆನಂದ ದಣಿವನ್ನು ದೂರ ಮಾಡುವುದು ಮಾತ್ರ ಸುಳ್ಳಲ್ಲ.
ಕೂಡ್ಲು ತೀರ್ಥ ಜಲಪಾತ ವೀಕ್ಷಣೆ ಯಾವ ಸಮಯದಲ್ಲಿ ಸೂಕ್ತ :
ಕೂಡ್ಲು ತೀರ್ಥ ಜಲಪಾತ ಭೇಟಿ ನೀಡಲು ಆಗಸ್ಟ್ ನಿಂದ ಜನವರಿ ತಿಂಗಳು ಸೂಕ್ತ. ಯಾಕೆಂದರೆ ಈ ಸಮಯದಲ್ಲಿ ನೀರಿನ ಹರಿವು ಹೆಚ್ಚು ಪ್ರಮಾಣದಲ್ಲಿ ಇರುವುದರಿಂದ ಜಲಪಾತ ವೀಕ್ಷಣೆಗೆ ಸಹಕಾರಿ.
ಜಲಪಾತವು ದಟ್ಟ ಅರಣ್ಯ ಪ್ರದೇಶದೊಳಗಿರುವುದರಿಂದ ಸಮೀಪದಲ್ಲಿ ಯಾವುದೇ ಅಂಗಡಿಗಳಿಲ್ಲ, ಆದ್ದರಿಂದ, ಜಲಪಾತಕ್ಕೆ ಚಾರಣ ಮಾಡುವವರು ಆಹಾರ ಮತ್ತು ನೀರನ್ನು ಕೊಂಡೊಯ್ಯಬೇಕಿದೆ.
ಆದರೆ ಪರಿಸರ ಸ್ವಚ್ಚತೆ ಕಾಪಾಡಬೇಕಾದ ಜವಾಬ್ದಾರಿ ಪ್ರವಾಸಿಗರಿಗೆ ಇರಬೇಕು.
ಯಾವುದೇ ಪ್ಲಾಸ್ಟಿಕ್ ಕಸ, ಚೀಲ, ಕುಡಿಯುವ ನೀರಿನ ಬಾಟಲುಗಳನ್ನು ಕಾಡಿನಲ್ಲಿ ಬಿಸಾಡದೆ ವಾಪಸ್ಸು ಬರುವಾಗ ತರಬೇಕು.
ಮಳೆಗಾಲದಲ್ಲಿ ಚಾರಣ ಮಾಡುವಾಗ ಜಿಗಣೆ (leeach) ಸಮಸ್ಯೆ ತುಸು ಹೆಚ್ಚು. ಜಿಗಣೆ (leeach) ನಿವಾರಿಸಲು ಸುಣ್ಣ ಅಥವಾ ಉಪ್ಪನ್ನು ಸ್ಥಳೀಯರು ಶಿಫಾರಸ್ಸು ಮಾಡುತ್ತಾರೆ.
ಮಳೆಗಾಲದಲ್ಲಿ ನೀರಿನ ಹರಿವು ಹೆಚ್ಚಿದ್ದು ನದಿ ದಾಟಲು ಪರ್ಯಾಯ ಮಾರ್ಗ ಹುಡುಕ ಬೇಕಾಗುತ್ತದೆ.
ಕೂಡ್ಲು ತೀರ್ಥ ಜಲಪಾತದ ಮೇಲಿರುವ ಪ್ರದೇಶದ ಮತ್ತೊಂದು ಜಲಪಾತವು ಕಾಡಿನ ಒಳಭಾಗದಲ್ಲಿದೆ ಎಂಬ ಕುತೂಹಲಕಾರಿ ಮಾಹಿತಿ ಕೂಡ ಸ್ಥಳೀಯವಾಗಿ ಕೇಳಿಬರುತ್ತಿದೆ.
ಈ ಜಲಪಾತದ ಹೆಸರು ಮಂಗ ತೀರ್ಥ ಎಂದಾಗಿದ್ದು , ಕೇವಲ ಮಂಗಗಳು ಮಾತ್ರ ಈ ಜಲಪಾತವನ್ನು ತಲುಪಬಹುದು ಎಂದು ನಂಬಲಾಗಿದೆ.
ಅದೆನೇ ಇರಲಿ ಈ ಬಾರಿ ಕೂಡ್ಲು ತೀರ್ಥ ಜಲಪಾತವನ್ನು ತಪ್ಪದೆ ನೋಡ ಬನ್ನಿ. ಕೂಡ್ಲು ತೀರ್ಥ ಜಲಪಾತ ನೋಡುವಾಗ ಕವಿ ದ.ರಾ. ಬೇಂದ್ರೆ ಅವರ ಕವನ ನೆನಪಾಗುತ್ತಿದೆ…
ವಿಡಿಯೋಗಾಗಿ…..
You must be logged in to post a comment Login