LATEST NEWS
ಬೆಂಕಿಯಲ್ಲಿ ಸ್ನಾನ – ವಿಷ್ಣುಮೂರ್ತಿ ದೈವದ ಒತ್ತೆಕೋಲದ ವಿಶೇಷ
ಬೆಂಕಿಯಲ್ಲಿ ಸ್ನಾನ – ವಿಷ್ಣುಮೂರ್ತಿ ದೈವದ ಒತ್ತೆಕೋಲದ ವಿಶೇಷ
ಮಂಗಳೂರು ಮಾರ್ಚ್ 11: ಕರಾವಳಿಯಲ್ಲಿ ಅತ್ಯಂತ ವಿರಳವಾಗಿರುವ ಹಾಗೂ ಕೇರಳದಲ್ಲಿ ಅತ್ಯಂತ ಪ್ರಭಾವಿ ದೈವವಾಗಿ ಆರಾಧಿಸಲ್ಪಡುತ್ತಿರುವ ವಿಷ್ಣುಮೂರ್ತಿ ದೈವದ ಒತ್ತೆಕೋಲ ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ ತಿರುವಾಲೆಯಲ್ಲಿ ನಡೆಯಿತು. ಬೆಂಕಿಯಲ್ಲೇ ಕುಳಿತು, ಮಲಗುವ ಈ ದೈವದ ನೇಮೋತ್ಸವವನ್ನು ನೋಡಲು ಊರ ಹಾಗೂ ಪರವೂರ ಸಾವಿರಾರು ಸಂಖ್ಯೆಯ ಭಕ್ತಾಧಿಗಳು ನೆರೆದಿದ್ದರು.
ಕೇರಳೀಯರ ಅತ್ಯಂತ ಪ್ರಭಾವಿ ದೈವವಾಗಿರುವ ಹಾಗೂ ಕರಾವಳಿಯ ಕೇರಳ ಗಡಿ ಭಾಗದಲ್ಲಿ ಮಾತ್ರ ಕಂಡು ಬರುವ ವಿಷ್ಣುಮೂರ್ತಿ ದೈವದ ಒತ್ತೆಕೋಲಕ್ಕೆ ತನ್ನದೇ ಆದ ಮಹತ್ವವಿದೆ. ಮರದೆತ್ತರದಲ್ಲಿ ಮರಗಳನ್ನು ಜೋಡಿಸಿ ಅದರಿಂದ ಉಳಿಯುವ ಕೆಂಡದಲ್ಲಿ ಈ ದೈವವು ಕುಳಿತುಕೊಳ್ಳುವ, ಮಲಗುವ ದೃಶ್ಯಗಳು ಸೇರಿದ್ದ ಎಲ್ಲರನ್ನೂ ನಿಬ್ಬೆರಗಾಗಿಸುವಂತಹುದಾಗಿದೆ.
ಯಾವ ಗ್ರಾಮದಲ್ಲಿ ಈ ಒತ್ತೆಕೋಲ ನಡೆಯುತ್ತದೋ, ಆ ಗ್ರಾಮದಾದ್ಯಂತದಿಂದ ಒಂದು ತಿಂಗಳಿನಿಂದ ಮರದ ತುಂಡುಗಳನ್ನು ಸಂಗ್ರಹಿಸಲಾಗುತ್ತದೆ. ಬಳಿಕ ಈ ಮರಗಳನ್ನು ಒತ್ತೆಕೋಲ ನಡೆಯುವಂತಹ ಸ್ಥಳದಲ್ಲಿ ಶೇಖರಿಸುವ ಮೂಲಕ ಒತ್ತೆಕೋಲ ನೇಮೋತ್ಸವದ ದಿನ ಇದಕ್ಕೆ ದೈವದ ಕಟ್ಟುಪಾಡುಗಳ ಮೂಲಕ ಬೆಂಕಿ ಹಚ್ಚಲಾಗುತ್ತದೆ.
ವಿಷ್ಣುಮೂರ್ತಿ ದೈವವು ವಿಷ್ಣುವಿನ ಅವತಾರವಾಗಿದ್ದು, ಹಿಂದೆ ಪ್ರಹ್ಲಾದನ ಭಕ್ತಿಗೆ ಒಲಿದ ವಿಷ್ಣುವು ಹಿರಣ್ಯಕಶ್ಯಪುವನ್ನು ನರಸಿಂಹಾವತಾರದಲ್ಲಿ ವಧೆ ಮಾಡಿದ್ದನು. ಈ ಸಂದರ್ಭದಲ್ಲಿ ದುಷ್ಟನ ವಧೆಯಿಂದಾಗಿ ವಿಷ್ಣುವಿನ ಮೈಯಲ್ಲೇ ರಕ್ತದಿಂದ ತುಂಬಿತ್ತು. ಆ ಸಂದರ್ಭದಲ್ಲಿ ವಿಷ್ಣು ಬೆಂಕಿಯಲ್ಲಿ ಸ್ನಾನ ಮಾಡುವ ಮೂಲಕ ತನ್ನ ಕೊಳೆಯನ್ನು ತೊಳೆದುಕೊಂಡ ಎನ್ನುವ ನಂಬಿಕೆ ಭಕ್ತರದ್ದಾಗಿದೆ.