LATEST NEWS
ದಲಿತರೆಂಬ ಕಾರಣಕ್ಕೆ ಮೀನು ಅಂಗಡಿ ನಡೆಸಲು ಉಡುಪಿ ನಗರಸಭೆಯ ಆರೋಗ್ಯಾಧಿಕಾರಿ ಅವಕಾಶ ನೀಡುತ್ತಿಲ್ಲ – ಮಹಿಳೆಯರ ಆರೋಪ
ಉಡುಪಿ ಜೂನ್ 6: ದಲಿತರೆಂಬ ಕಾರಣಕ್ಕೆ ಮೀನು ಅಂಗಡಿ ನಡೆಸಲು ಉಡುಪಿ ನಗರಸಭೆಯ ಆರೋಗ್ಯಾಧಿಕಾರಿ ಬಿಡುತ್ತಿಲ್ಲ ಎಂಬ ಆರೋಪದ ವಿಡಿಯೊ ಒಂದು ವೈರಲ್ ಈಗ ಆಗಿದೆ. ಈಗ ಭಾರಿ ವಿವಾದ ಸೃಷ್ಠಿಸಿದೆ. ಈ ವಿಡಿಯೋದಲ್ಲಿ ಆರೋಗ್ಯಾಧಿಕಾರಿಗಳು ಅಂಗಡಿ ತೆರುವು ಗೊಳಿಸುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಉಡುಪಿಯ ಬ್ರಹ್ಮಗಿರಿ ಸರ್ಕಲ್ ನಲ್ಲಿ ಮೂವರು ಮಹಿಳೆಯರು ಸೇರಿ ಸಣ್ಣ ಮೀನಿನ ಅಂಗಡಿ ನಡೆಸುತ್ತಿದ್ದಾರೆ. ಆದರೆ ಇವರಿಗೆ ದಲಿತರೆಂಬ ಕಾರಣಕ್ಕೆ ಮೀನು ಮಾರಾಟಕ್ಕೆ ಅವಕಾಶ ನೀಡಬಾರದೆಂದು ಮೀನುಗಾರರು ದೂರು ನೀಡಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ. ಅಲ್ಲದೆ ಈ ವೀಡಿಯೋದಲ್ಲಿ ಮೀನು ಅಂಗಡಿಯ ಮಾಲಕಿ ತಮ್ಮ ಅಂಗಡಿ ತೆರವುಗೊಳಿಸುವಂತೆ ಹೆಲ್ತ್ ಇನ್ಸ್‌ಪೆಕ್ಟರ್ ಕಿರುಕುಳ ನೀಡುತ್ತಿದ್ದಾರೆಂಬ ಆರೋಪ ಮಾಡಲಾಗಿದೆ. ಸುಷ್ಮಾ ರಾಜ್ ಎಂಬ ಯುವತಿಯು ಈ ಮಹಿಳೆಯರ ಪರವಾಗಿ ಇನ್ಸ್ಟಾಗ್ರಾಮ್’ನಲ್ಲಿ ವೀಡಿಯೋ ಮಾಡಿ ನ್ಯಾಯಾಕ್ಕಾಗಿ ಬೇಡಿಕೆ ಇಟ್ಟಿದ್ದಾಳೆ.
ದಲಿತರೆಂಬ ಕಾರಣಕ್ಕೆ ಅಂಗಡಿ ತೆರವುಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆಯೆಂಬುವುದು ಮಹಿಳೆಯರ ಆರೋಪ. ಮೀನುಗಾರರ ದೂರು ಬಂದಿದೆ ಎಂದು ಹೇಳುತ್ತಾರೆ. ಅವರಿಗೆ ಮಾತ್ರ ವ್ಯಾಪರಕ್ಕೆ ಅವಕಾಶವಿದೆ ಎನ್ನುತ್ತಾರೆ. ದಲಿತರು ಮೀನು ಮಾರಾಟದ ಅಂಗಡಿ ಇಡಬಾರದೆಂದು ಹೇಳುತ್ತಾರೆ. ಆದರೆ ಮೀನುಗಾರಿಕೆ ಅವರು ಮಾತ್ರ ಮಾಡಬೇಕೆಂಬ ನಿಯಮವಿಲ್ಲ. ಮೀನು ಮಾಡಿದ್ದು ಅವರಲ್ಲ, ಇದು ಪ್ರಕೃತಿಯ ಸಮುದ್ರ ಇಲ್ಲಿ ಯಾರು ಬೇಕಾದರೂ ಮೀನು ಹಿಡಿದು, ಮಾರಿ ಬದುಕಬೇಕೆಂದು ಅಂಗಡಿ ಮಾಲಕಿ ತನ್ನ ನೋವನ್ನು ಹೇಳಿ ಕೊಳ್ಳುವ ವೀಡಿಯೋ ವೈರಲಾಗಿದೆ.