KARNATAKA
ಮಳೆಯಲ್ಲೇ 5 ಕಿ.ಮೀ ಹೊತ್ತು ಸಾಗಿ ಮಹಿಳಾ ರೋಗಿ ಪ್ರಾಣ ಉಳಿಸಿದ ಗ್ರಾಮಸ್ಥರು
ಬೆಳಗಾವಿ, ಜುಲೈ 20: ಐದು ಕಿಲೋಮೀಟರ್ ವರೆಗೆ ಹೆಗಲ ಮೇಲೆ ಮಹಿಳಾ ರೋಗಿಯನ್ನು ಹೊತ್ತುಕೊಂಡು ಬಂದು ಗ್ರಾಮಸ್ಥರು ಆಸ್ಪತ್ರೆಗೆ ಸೇರಿಸಿದ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ನಡೆದಿದೆ.
ದಟ್ಟವಾದ ಕಾಡಂಚಿನಲ್ಲಿ ಇರುವ ಅಂಗಾವ್ ಗ್ರಾಮದ 36 ವರ್ಷದ ಮಹಿಳೆ ಹರ್ಷದಾ ಎಂಬುವವರು ತೀವ್ರ ಜ್ವರದಿಂದ ಮೂರ್ಛೆ ಹೋಗಿದ್ದರು. ಮಹಿಳೆಯನ್ನು ಉಳಿಸಲು ಗ್ರಾಮಸ್ಥರು ಮಳೆಯನ್ನೂ ಚಿಂತಿಸದೆ ಪ್ರಾಣ ಉಳಿಸಿದ್ದಾರೆ. ಅಸ್ವಸ್ಥಗೊಂಡಿದ್ದ ಹರ್ಷದಾ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಬೇಕಿತ್ತು. ದಟ್ಟ ಅಭಯಾರಣ್ಯದಲ್ಲಿ ಇರುವ ಅಂಗಾವ್ ಗ್ರಾಮಕ್ಕೆ ರಸ್ತೆಯೂ ಇಲ್ಲ, ಸೇತುವೆಯೂ ಇಲ್ಲ, ಮೊಬೈಲ್ ನೆಟ್ವರ್ಕ್ ಸಹ ಬರೋದಿಲ್ಲ. ಆದರೆ ಹರ್ಷದಾರ ಪ್ರಾಣ ಉಳಿಸಲು ಗ್ರಾಮಸ್ಥರು ಕಟ್ಟಿಗೆಯಲ್ಲಿ ಸ್ಟ್ರೇಚರ್ ಮಾದರಿ ಮಾಡಿ ಮಹಿಳೆಯನ್ನು ಹೊತ್ತುಕೊಂಡು, ರಕ್ಕಸ ಮಳೆಯಲ್ಲೇ ಐದು ಕಿಲೋಮೀಟರ್ ದೂರು ಸಾಗಿದ್ದಾರೆ.
ಆ್ಯಂಬುಲೆನ್ಸ್ ಬರೋಕೆ ರಸ್ತೆ ಇರುವ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಚಿಕಲೆ ವರೆಗೂ ಮಹಿಳೆಯನ್ನು ಹೊತ್ತುಕೊಂಡು ಬಂದಿದ್ದು ಅಲ್ಲಿಂದ ಮತ್ತೆ 1 ಕಿಲೋಮೀಟರ್ ದೂರ ಹೋಗಿ ಮೊಬೈಲ್ ನೆಟ್ವರ್ಕ್ ಬರೋ ಸ್ಥಳದಿಂದ 108ಗೆ ಕರೆ ಮಾಡಿ ಮಹಿಳೆಯ ಪ್ರಾಣ ಉಳಿಸುವಲ್ಲಿ ಗ್ರಾಮಸ್ಥರು ಬಹಳಷ್ಟು ಪರಿಶ್ರಮ ಪಟ್ಟಿದ್ದಾರೆ.
ಇನ್ನು ಕರೆ ಬರುತ್ತಿದ್ದಂತೆ ತಕ್ಷಣವೇ ಜಾಂಬೋಟಿಯಲ್ಲಿ ಇರುವ ಆ್ಯಂಬುಲೆನ್ಸ್ ರೋಗಿ ಇರುವ ಸ್ಥಳಕ್ಕೆ ಬಂದಿದ್ದು ಮೊದಲು ಆ್ಯಂಬುಲೆನ್ಸ್ ಸಿಬ್ಬಂದಿ ಮೂರ್ಚೆ ಹೋಗಿದ್ದ ಹರ್ಷದಾಗೆ ಪ್ರಾರ್ಥಮಿಕ ಚಿಕಿತ್ಸೆ ನೀಡಿ ಬಳಿಕ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಖಾನಾಪುರ ತಾಲೂಕಿನ ಕಾಡಂಚಿನಲ್ಲಿ ಇರುವ ಹತ್ತಾರು ಗ್ರಾಮಸ್ಥರ ಪರಿಸ್ಥಿತಿ ವಿಭಿನ್ನವಾಗಿಲ್ಲ. ಮಕ್ಕಳು, ಗರ್ಭಿಣಿಯರು, ವಯಸ್ಸಾದವರನ್ನ ವೈದ್ಯಕೀಯ ಚಿಕಿತ್ಸೆ ಕೊಡಿಸಬೇಕೆಂದ್ರೆ ಇಂತಹ ಕಷ್ಟ ಎದುರಿಸುವ ಸ್ಥಿತಿ ಇದೆ. ಆದಷ್ಟು ಬೇಗ ಸಂಬಂಧ ಪಟ್ಟ ಅಧಿಕಾರಿಗಳು ಮೂಲ ಸೌಕರ್ಯ ನೀಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.