KARNATAKA
ವಿಜಯಪುರ: ಕೆನರಾ ಬ್ಯಾಂಕಿನಲ್ಲಿ 58 ಕೆಜಿ ಚಿನ್ನ ಕದ್ದೊಯ್ದ ಕಳ್ಳರು!

ವಿಜಯಪುರ, ಜೂನ್ 03: ಜಿಲ್ಲೆಯ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕಿನಲ್ಲಿ ಸಿನಿಮೀಯ ರೀತಿಯಲ್ಲಿ ದರೋಡೆ ನಡೆದಿದೆ. ಕಳೆದ ಮೇ 24 ರಂದು ರಾತ್ರಿ ಬ್ಯಾಂಕ್ನಲ್ಲಿದ್ದ 58 ಕೆಜಿ 975 ಗ್ರಾಂ ಚಿನ್ನಾಭರಣ ಹಾಗೂ 5.20 ಲಕ್ಷ ನಗದನ್ನು ಕದ್ದು ಆರೋಪಿಗಳು ಪರಾರಿಯಾಗಿದ್ದಾರೆ.
ಈ ಕುರಿತು ಎಸ್ಪಿ ಲಕ್ಷ್ಮಣ ನಿಂಬರಗಿ ಅವರು ಮಾತನಾಡಿದ್ದು, ‘ಪ್ರಕರಣಕ್ಕೆ ಸಂಬಂಧಿಸಿದಂತೆ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕಿನ ಮ್ಯಾನೇಜರ್ ಠಾಣೆಗೆ ಬಂದು ಕಂಪ್ಲೇಂಟ್ ಕೊಟ್ಟಿದ್ದಾರೆ. 23-5-2025ರಂದು ಬ್ಯಾಂಕ್ ಲಾಕ್ ಮಾಡಿ ಸಿಬ್ಬಂದಿ ಹೋಗಿದ್ದರು. 25 ನೇ ತಾರೀಖು ಅವರ ಸಿಬ್ಬಂದಿ ಸ್ವಚ್ಛತೆಗೆ ಎಂದು ಬಂದಾಗ ಶಟರ್ಸ್ ಲಾಕ್ ಕಟ್ ಆಗಿರುವುದು ಗಮನಕ್ಕೆ ಬಂದಿದೆ.

ನಂತರ ಪೊಲೀಸ್ ಇಲಾಖೆಗೆ ಮಾಹಿತಿಯನ್ನು ಕೊಟ್ಟಿದ್ದಾರೆ. ನಂತರ ಇದನ್ನು ಪರಿಶೀಲಿಸಿದಾಗ ಬ್ಯಾಂಕ್ಗೆ ಕಳ್ಳರು ಬಂದು ಕದ್ದಿರುವುದು ಗಮನಕ್ಕೆ ಬಂದಿದೆ. ಇದೀಗ ಬ್ಯಾಂಕ್ ಉನ್ನತ ಮಟ್ಟದ ಅಧಿಕಾರಿಗಳು ಇದನ್ನು ಲೆಕ್ಕಹಾಕಿದ್ದಾರೆ. ಜನರು ಲೋನ್ಗಾಗಿ ಬಂಗಾರವನ್ನು ಅಡವಿಟ್ಟು ದುಡ್ಡನ್ನು ತೆಗೆದುಕೊಂಡಿದ್ದು ಎಂದು ಹೇಳಿದ್ದಾರೆ. ಪ್ರಕರಣದ ತನಿಖೆಗೆ 8 ತಂಡಗಳನ್ನು ರಚಿಸಿದ್ದೇವೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತರಲಾಗುವುದು’ ಎಂದು ಹೇಳಿದ್ದಾರೆ.
ಮನಗೂಳಿ ಪಟ್ಟಣ ನಿವಾಸಿ ಶಿವನಗೊಂಡ ಅವರು ಮಾತನಾಡಿದ್ದು, ‘ಬ್ಯಾಂಕ್ನಲ್ಲಿ ಚಿನ್ನ ಹಾಗೂ ಹಣ ಕಳ್ಳತನವಾಗಿರುವ ಬಗ್ಗೆ ಗ್ರಾಹಕರು ಮನನೊಂದಿದ್ದಾರೆ. ಪೊಲೀಸರು ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲಿ. ಬ್ಯಾಂಕ್ನವರು ಮುನ್ನೆಚ್ಚರಿಕೆ ವಹಿಸಬೇಕಿತ್ತು. ಆದಷ್ಟು ಬೇಗ ಇದಕ್ಕೆ ಪರಿಹಾರ ಕಲ್ಪಿಸಿಕೊಡಬೇಕು’ ಎಂದು ವಿನಂತಿಸಿಕೊಂಡಿದ್ದಾರೆ.