BELTHANGADI
ಸೌಜನ್ಯಾ ಪ್ರಕರಣ ಹಾಗೂ ಧರ್ಮಸ್ಥಳ ಕ್ಷೇತ್ರಕ್ಕೂ ತಾಳೆ ಹಾಕುವುದನ್ನ ನಾವೂ ಸಹಿಸೋದಿಲ್ಲ- ವಿಎಚ್ ಪಿ
ಬೆಳ್ತಂಗಡಿ ಅಗಸ್ಟ್ 02: ವಿಧ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಕ್ಷೇತ್ರದಂತಹ ಪುಣ್ಯ ಕ್ಷೇತ್ರದ ಅಪಚಾರ ಅವಮಾನವಾಗುವುದನ್ನು ನಾವೂ ಸಹಿಸುವುದಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ನ ಹಿರಿಯ ಮುಖಂಡ ಎಂ.ಬಿ.ಪುರಾಣಿಕ್ ತಿಳಿಸಿದ್ದಾರೆ.
ಬೆಳ್ತಂಗಡಿಯಲ್ಲಿ ಮಾತನಾಡಿದ ಅವರು ಸೌಜನ್ಯಾ ಪ್ರಕರಣ ಇತ್ಯರ್ಥ ಆಗದೇ ಇರೋದು ವ್ಯವಸ್ಥೆಗೆ ಕಪ್ಪುಚುಕ್ಕೆ. ಹೀಗಾಗಿ ಮರು ತನಿಖೆ ನಡೆಸಬೇಕೆನ್ನುವುದು ವಿಎಚ್‍ಪಿಯ ಆಗ್ರಹವಾಗಿದೆ. ಹಾಲಿ ನ್ಯಾಯಾಧೀಶರ ಮೂಲಕ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುತ್ತೇವೆ ಎಂದರು.
ಸೌಜನ್ಯಾಳಿಗೆ ನ್ಯಾಯ ಸಿಗಬೇಕೆಂದು ಕರಾವಳಿಯ ಎಲ್ಲಾ ದೇವಸ್ಥಾನ ಹಾಗೂ ದೈವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಲಿದ್ದೇವೆ ಎಂದಿದ್ದಾರೆ. ಜೊತೆಗೆ ಯಾವುದೇ ಕ್ಷೇತ್ರಕ್ಕೆ, ಧರ್ಮಕ್ಕೆ ಅಪಚಾರ ಆದಾಗ ವಿಶ್ವ ಹಿಂದೂ ಪರಿಷತ್ ವಿರೋಧವನ್ನ ಸೂಚಿಸಿದೆ. ಅದೇ ರೀತಿ ಧರ್ಮಸ್ಥಳದಂತಹ ಪುಣ್ಯ ಕ್ಷೇತ್ರಕ್ಕೆ ಅಪಚಾರ ಅವಮಾನವಾಗುವುದನ್ನ ನಾವೂ ಸಹಿಸೋದಿಲ್ಲ ಎಂದು ಹೇಳಿದರು.
ಕ್ಷೇತ್ರಕ್ಕೆ ಮುತ್ತಿಗೆ ಹಾಕುವುದನ್ನು ನಾವು ಸಹಿಸುವುದಿಲ್ಲ. ಮಾತ್ರವಲ್ಲ ಸೌಜನ್ಯಾ ಪ್ರಕರಣ ಹಾಗೂ ಧರ್ಮಸ್ಥಳ ಕ್ಷೇತ್ರಕ್ಕೂ ತಾಳೆ ಹಾಕುವುದನ್ನ ನಾವೂ ಸಹಿಸೋದಿಲ್ಲ. ಧರ್ಮಸ್ಥಳ ಕ್ಷೇತ್ರ ಇವತ್ತು ನಿನ್ನೆಯದಲ್ಲ, ಕ್ಷೇತ್ರಕ್ಕೆ ಅದರದ್ದೇ ಆದ ಇತಿಹಾಸ ಇದೆ ಎಂದ ಅವರು ಧರ್ಮಸ್ಥಳ ಕ್ಷೇತ್ರದ ಗೌರವವನ್ನ ಪ್ರತಿಷ್ಠೆಯನ್ನ ಯಾವ ಬೆಲೆ ಕೊಟ್ಟಾದರೂ ವಿಶ್ವ ಹಿಂದೂ ಪರಿಷತ್ ಕಾಪಾಡುತ್ತದೆ ಎಂದರು.
https://youtu.be/d5vC_AvnfmI