LATEST NEWS
ಗುಳಿಗ ದೈವವನ್ನು ಎದುರು ಹಾಕಿಕೊಂಡು ಸಂಕಷ್ಟಕ್ಕೆ ಸಿಲುಕಿದ ವೆನ್ಲಾಕ್ ಆಸ್ಪತ್ರೆ
ಮಂಗಳೂರು ಸೆಪ್ಟೆಂಬರ್ 25: ತುಳುನಾಡಿನಲ್ಲಿ ದೈವಗಳನ್ನು ಎದುರು ಹಾಕಿ ಯಾವುದೇ ಕಾರ್ಯ ನಡೆಸಲು ಆಗುವುದಿಲ್ಲ ಎನ್ನುವುದು ಹಲವು ನಿದರ್ಶನಗಳ ಮೂಲಕ ತಿಳಿದು ಬಂದಿದೆ. ಆದರೂ ಹಣದ ಆಸೆಗೆ ಬಿದ್ದು ದೈವಗಳನ್ನು ಕಡೆಗಣಿಸಿ ಮತ್ತೆ ಮತ್ತೆ ಜನಪ್ರತಿನಿಧಿಗಳು ಕೆಲಸ ಮಾಡುತ್ತಿದ್ದು, ಈಗಾಗಲೇ ಒಂದು ಕಾಮಗಾರಿ ಹಳ್ಳಕ್ಕೆ ಹಿಡಿದಿದ್ದರೆ ಮತ್ತೊಂದು ಅದೇ ರೀತಿಯ ಸಮಸ್ಯೆಗೆ ಗುರಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲಾಸ್ಪತ್ರೆ ವೆನ್ಲಾಕ್‌ನಲ್ಲಿ ಗುಳಿಗ ದೈವದ ಕಾರ್ಣಿಕ ನಡೆದಿದೆ. ಮಂಗಳೂರಿನ ಹಂಪನಕಟ್ಟೆಯಲ್ಲಿ ನಿರ್ಮಾಣವಾಗಿರುವ ಸೂಪರ್ ಸ್ಪೆಷಾಲಿಟಿ ವೆನ್ಲಾಕ್ ಜಿಲ್ಲಾಸ್ಪತ್ರೆಯ ಸರ್ಜಿಕಲ್ ಸೂಪರ್ ಸ್ಪೆಷಾಲಿಟಿ ವಿಭಾಗ ಕಟ್ಟಡ ನಿರ್ಮಾಣಕ್ಕೆಂದು ಇಲ್ಲಿದ್ದ ಹಲವು ಮರಗಳನ್ನು ಕಡಿಯಲಾಗಿತ್ತು. ಈ ವೇಳೆ ಅಲ್ಲಿದ್ದ ಗುಳಿಗ ದೈವದ ಸಾನಿಧ್ಯವಿದ್ದ ಬೃಹದಾಕಾರದ ಅಶ್ವಥ ಮರವನ್ನೂ ಕಡಿಯಲಾಗಿತ್ತು. ಭಕ್ತರ ಆಕ್ರೋಶಕ್ಕೆ ಕೊನೆಗೆ ಗುಳಿಗ ದೈವದ ಕಟ್ಟೆಯನ್ನು ಸ್ಥಳಾಂತರಿಸಲಾಗಿತ್ತು.
ಆದರೆ ಯಾವಾಗ ದೈವ ಸಾನಿಧ್ಯವಿದ್ದ ಮರವನ್ನು (ದೈವದ ಕಟ್ಟೆ) ತೆರವು ಮಾಡಲಾಯಿತೋ ಅಂದಿನಿಂದ ಇಲ್ಲಿ ಗುತ್ತಿಗೆದಾರನಿಗೆ ಹಲವು ಸಂಕಷ್ಟಗಳು ಎದುರಾಗಿವೆ. ಕಾರ್ಮಿಕರು, ಹಾಗೂ ಆಸ್ಪತ್ರೆ ಸಿಬ್ಬಂದಿಗಳು ಹಲವು ಅವಘಡಗಳು, ಸಮಸ್ಯೆಗಳಿಗೆ ಸಿಲುಕಿ ಆಸ್ಪತ್ರೆ ಸೇರಿದ್ದಾರೆ. ಕಾಮಗಾರಿಯ ವೇಳೆ ನಾಗರ ಹಾವು ಕೂಡ ಬಲಿಯಾದ ಘಟನೆ ನಡೆದಿದೆ. ಒ.ಟಿ ಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಓರ್ವ ಸಿಬ್ಬಂದಿಗೆ ಗಂಭೀರ ಸಮಸ್ಯೆ ಎದುರಾಗಿದೆ. ಸದ್ಯ ಇದೀಗ ಕುಂಟುತ್ತಾ ಸಾಗಿದ್ದ ಕಾಮಗಾರಿ ಇತ್ತೀಚೆಗಷ್ಟೇ ಪೂರ್ಣಗೊಂಡು ಆಸ್ಪತ್ರೆಯ ಉದ್ಘಾಟನೆ ಆಗಿದೆ.
ಆದರೆ ಸಮಸ್ಯೆ ಅಲ್ಲಿಗೆ ಮುಗಿದಿಲ್ಲ. ಹಣದ ಬಲದಲ್ಲಿ ಕಟ್ಟಡ ನಿರ್ಮಾಣ ಮಾಡಿದರೂ ದೈವ ಮಾತ್ರ ಬಿಡಲಿಲ್ಲ. ಆಸ್ಪತ್ರೆಯನ್ನು ಉದ್ಘಾಟನೆ ಮಾಡಿದರುೂ ಮಾತ್ರ ಆಸ್ಪತ್ರೆಯಲ್ಲಿ ಇನ್ನೂ ಕೂಡ ಸಮಸ್ಯೆಗಳು ಮುಂದುವರೆದಿವೆ. .
ಅಕಾಲಿಕ ಸಾವು ನೋವಿನ ಬಳಿಕ ಸರ್ಕಾರಿ ವೈದ್ಯಾಧಿಕಾರಿ, ಅಧಿಕಾರಿ ಸಿಬ್ಬಂದಿ ಪ್ರಶ್ನಾಚಿಂತನೆಯ ಮೊರೆ ಹೋಗಿದ್ದಾರೆ. ಪ್ರಶ್ನಾ ಚಿಂತನೆಯಲ್ಲಿ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಈ ಹಿಂದೆ ಗುಳಿಗ ದೈವದ ಸಾನಿಧ್ಯವಿದ್ದು ಗುಳಿಗ ದೈವ ಕೋಪಗೊಂಡಿರುವುದು ಬೆಳಕಿಗೆ ಬಂದಿದೆ. ಸದ್ಯ ಈಗ ಆಸ್ಪತ್ರೆ ವೈದ್ಯರು, ಸಿಬ್ಬಂದಿಗಳೇ ಹಣ ಸಂಗ್ರಹಿಸಿ ಗುಳಿಗ ದೈವದ ಪುನರ್ ಪ್ರತಿಷ್ಠಾಪನೆ ಮಾಡಿದ್ದಾರೆ. ಸ್ಥಳಾಂತರ ಮಾಡಿದ್ದ ಅಶ್ವಥ ಮರದ ಬುಡದಲ್ಲೇ ಗುಳಿಗ ದೈವಕ್ಕೆ ಕಟ್ಟೆ ನಿರ್ಮಾಣ ಮಾಡಲಾಗಿದೆ. ಪ್ರಾಯಶ್ಚಿತ ಸಹಿತ ವಿವಿಧ ಧಾರ್ಮಿಕ ವಿಧಿಗಳನ್ನು ನಡೆಸಲಾಗಿದೆ. ಇದೀಗ ದೈವದ ಪ್ರತಿಷ್ಠೆ ಕಾರ್ಯದ ಬಳಿಕ 15 ದಿನದಲ್ಲೇ ಆಸ್ಪತ್ರೆಯನ್ನು ಉದ್ಘಾಟನೆ ಮಾಡಲಾಗಿದೆ. ಐಸಿಯುಗೆ ಬರುವ ರೋಗಿಗಳ ಆರೋಗ್ಯದಲ್ಲೂ ಚೇತರಿಕೆ ಕಂಡುಬಂದಿದೆ. ಗುಳಿಗ ದೈವದ ಕಾರಣಿಕಕ್ಕೆ ಸರ್ಕಾರಿ ಜಿಲ್ಲಾಸ್ಪತ್ರೆಯ ಆಡಳಿತ ಮಂಡಳಿ ತಲೆಬಾಗಿದೆ.