LATEST NEWS
ಆಗುಂಭೆ ಘಾಟಿಯಲ್ಲಿ 12 ಟನ್ ಗಿಂತ ಅಧಿಕ ಭಾರದ ವಾಹನ ಸಂಚಾರ ನಿಷೇಧ

ಉಡುಪಿ: ಆಗುಂಭೆ ಘಾಟಿಯಲ್ಲಿ ಮಳೆಗಾಲ ಮುಗಿಯುವರೆಗೆ ಅಧಿಕ ಭಾರದ ವಾಹನಗಳ ಸಂಚಾರವನ್ನು ನಿಷೇಧಿಸಿ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶ ಹೊರಡಿಸಿದ್ದಾರೆ. ಜೂನ್ 15 ರಿಂದ ಅಗಸ್ಟ್ 15 ರವರೆಗೆ ತೀರ್ಥಹಳ್ಳಿ- ಉಡುಪಿ ರಾಷ್ಟ್ರೀಯ ಹೆದ್ದಾರಿ 169ಎ ಆಗುಂಬೆ ಘಾಟಿಯಲ್ಲಿ 12 ಟನ್‌ಗಿಂತ ಅಧಿಕ ಭಾರದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದ್ದು,ಪರ್ಯಾಯ ಮಾರ್ಗದ ವ್ಯವಸ್ಥೆ ಕಲ್ಪಿಸಲಾಗಿದೆ.
ಆಗುಂಬೆ ಘಾಟಿಯ ರಸ್ತೆ ತುಂಬಾ ಕಿರಿದಾಗಿದ್ದು, ಸದಾ ಸಂಚಾರ ದಟ್ಟಣೆ ಯಿಂದ ಕೂಡಿರುವ ರಸ್ತೆ ಆಗಿರುತ್ತದೆ. ಮಳೆಗಾಲದಲ್ಲಿ ಭಾರಿ ಸರಕು ಸಾಗಾಣೆ ವಾಹನಗಳು ಸಂಚರಿಸುವುದರಿಂದ ರಸ್ತೆಯ ಬದಿ ಮಣ್ಣು ಕುಸಿತವಾಗುವ ಸಾಧ್ಯತೆ ಇದೆ. ಸುಗಮ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆ ಇರುವುದ ರಿಂದ ರಾಷ್ಟ್ರೀಯ ಹೆದ್ದಾರಿ 169ಎ ರ ತೀರ್ಥಹಳ್ಳಿ- ಉಡುಪಿ ರಸ್ತೆಯ ಆಗುಂಬೆ ಘಾಟಿಯಲ್ಲಿ ಮಳೆಗಾಲ ಮುಗಿಯುವವರೆಗೆ 12 ಟನ್‌ಗಿಂತ ಹೆಚ್ಚು ಭಾರದ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಈ ವಾಹನಗಳಿಗೆ ಪರ್ಯಾಯವಾಗಿ ಉಡುಪಿ- ಬ್ರಹ್ಮಾವರ-ಬಾರಕೂರು – ಶಂಕರನಾರಾಯಣ- ಸಿದ್ಧಾಪುರ- ಹೊಸಂಗಡಿ- ಹುಲಿಕಲ್ ಘಾಟಿ- ಹೊಸ ನಗರ- ತೀರ್ಥಹಳ್ಳಿ ಮತ್ತು ಉಡುಪಿ ಕಾರ್ಕಳ- ಬಜಗೋಳಿ- ಎಸ್.ಕೆ. ಬಾರ್ಡರ್- ಕೆರೆಕಟ್ಟೆ- ಶೃಂಗೇರಿ-ಶಿವಮೊಗ್ಗ ಮಾರ್ಗದಲ್ಲಿ ಸಂಚರಿಸಬಹುದಾಗಿದೆ ಎಂದು ಆದೇಶದಲ್ಲಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.