LATEST NEWS
ಆಯುರ್ವೇದ ಎರಡನೇ ದರ್ಜೆಯ ಚಿಕಿತ್ಸಾ ಪದ್ಧತಿ ಅಲ್ಲ – ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ
ಉಡುಪಿ: ಆಯುರ್ವೇದ ಎರಡನೇ ದರ್ಜೆಯ ಚಿಕಿತ್ಸಾ ಪದ್ಧತಿ ಅಲ್ಲ, ಆಯುರ್ವೇದಕ್ಕೂ ಅಂತರಾಷ್ಟ್ರೀಯ ಮಾನ್ಯತೆ ಸಿಗಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಉಡುಪಿಯಲ್ಲಿ ಆಯುರ್ವೇದಿಕ್ ಆಸ್ಪತ್ರೆ ಉದ್ಘಾಟನೆ ವೇಳೆ ಮಾತನಾಡಿದ ಅವರು, ಎಲ್ಲ ದೇಶದಲ್ಲಿ ಅವರದ್ದೇ ಆದ ವೈದ್ಯಕೀಯ ಪದ್ಧತಿಗಳು ಇರುತ್ತದೆ. ಅಂತಾರಾಷ್ಟ್ರೀಯವಾಗಿ ಆಯುರ್ವೇದ ಪದ್ಧತಿಯನ್ನು ಸಾಬೀತು ಮಾಡಬೇಕಾದರೆ ಕೆಲವು ಪುರಾವೆಗಳು ಸಂಶೋಧನೆಗಳು ಬೇಕಾಗುತ್ತವೆ ಎಂದರು.
ನಮ್ಮ ಎಲ್ಲ ಆಯುರ್ವೇದ ಆಸ್ಪತ್ರೆಗಳ ಪಕ್ಕದಲ್ಲಿ ಸಂಶೋಧನಾ ಕೇಂದ್ರಗಳನ್ನು ಮಾಡಿದ್ದೇವೆ. ಕೆಲವೇ ವರ್ಷಗಳಲ್ಲಿ ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಕಾರದಿಂದ ಖಾಸಗಿ ಸಂಸ್ಥೆಗಳು ಆಯುರ್ವೇದ ಕಾಲೇಜುಗಳ ಸಹಭಾಗಿತ್ವದಲ್ಲಿ ಭಾರತದ ಆಯುರ್ವೇದ ಚಿಕಿತ್ಸೆಗೆ ಅಂತಾರಾಷ್ಟ್ರೀಯ ಮಾನ್ಯತೆ ಸಿಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಕೆಲಸ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಆಯುರ್ವೇದ ಚಿಕಿತ್ಸೆ ಇಎಸ್‍ಐ ವ್ಯಾಪ್ತಿಯೊಳಗೆ ಬರಬೇಕು ಎಂಬುದು ನನ್ನ ಒತ್ತಾಯ. ಅಲೋಪತಿ ಚಿಕಿತ್ಸೆಗಿಂತ ಆಯುರ್ವೇದ ಕಡಿಮೆ ಖರ್ಚಿನದ್ದಾಗಿರುವುದರಿಂದ ಜನಸಾಮಾನ್ಯರಿಗೆ ಕೈಗೆಟುಕುವ ಬೆಲೆಯಲ್ಲಿ ಚಿಕಿತ್ಸೆಗಳು ಸಿಗುತ್ತಿವೆ. ಆಯುರ್ವೇದ ಪರಿಣಾಮಕಾರಿ ಮತ್ತು ಅಡ್ಡ ಪರಿಣಾಮಗಳು ಇಲ್ಲದ ಚಿಕಿತ್ಸಾ ಪದ್ಧತಿ ಎಂದು ತಿಳಿಸಿದರು.
ಸರ್ಕಾರ ಆಯುರ್ವೇದ ಪದ್ಧತಿಯನ್ನು ಮಾನ್ಯ ಮಾಡಬೇಕು. ಹಲವಾರು ರೋಗಗಳನ್ನು ಆಯುರ್ವೇದ ಪದ್ಧತಿಯಲ್ಲಿ ವಾಸಿ ಮಾಡಲಾಗಿದೆ. ಆಯುರ್ವೇದ ಪದ್ಧತಿ ಬಗೆಗಿರುವ ಹಿಂಜರಿಕೆ ಜನರಿಂದ ದೂರ ಹೋಗಬೇಕು. ಆಯುರ್ವೇದಿಕ್ ಬಗೆಗಿನ ನಕಾರಾತ್ಮಕ ಅಭಿಪ್ರಾಯ ಹೋಗಿ ಸಕಾರಾತ್ಮಕ ಅಭಿಪ್ರಾಯಗಳನ್ನು ಬೆಳೆಸಿಕೊಳ್ಳಬೇಕು. ನಮ್ಮ ಸರ್ಕಾರಗಳೂ ಆಯುರ್ವೇದ ಪದ್ಧತಿಯನ್ನು ಬೆಳೆಸಬೇಕು ಎಂದರು.