LATEST NEWS
ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಎಪಿಎಲ್ ಕಾರ್ಡ್‌ದಾರರಿಗೆ ಸರಿಯಾಗಿ ಅಕ್ಕಿ ಪೂರೈಕೆಯಾಗುತ್ತಿಲ್ಲ – ಶಾಸಕ ಕಾಮತ್

ಮಂಗಳೂರು ಸೆಪ್ಟೆಂಬರ್ 27: ಸಾರ್ವಜನಿಕ ಪಡಿತರ ವ್ಯವಸ್ಥೆಯಡಿ ಕಳೆದ ನಾಲ್ಕೈದು ತಿಂಗಳಿಂದ ಅವಿಭಜಿತ ಜಿಲ್ಲೆಗಳಲ್ಲಿ ಎಪಿಎಲ್ ಕಾರ್ಡ್‌ದಾರರಿಗೆ ಅಕ್ಕಿ ಸಿಗುತ್ತಿಲ್ಲ ಎಂಬ ದೂರುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದ್ದು ಈ ಅವ್ಯವಸ್ಥೆಗೆ ನೇರವಾಗಿ ರಾಜ್ಯ ಸರ್ಕಾರದ ಅರ್ಥವಿಲ್ಲದ ನೀತಿ ನಿರೂಪಣೆಯೇ ಕಾರಣ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಹೇಳಿದರು.
ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ದಾರರಿಗೆ ಕೇಂದ್ರ ಸರ್ಕಾರದಿಂದ ಈಗಾಗಲೇ ಉಚಿತವಾಗಿ ಅಕ್ಕಿ ಪೂರೈಕೆಯಾಗುತ್ತಿದೆ. ಆದರೆ ಎಪಿಎಲ್ ಕಾರ್ಡ್‌ದಾರರಿಗೆ ಸಿಗಬೇಕಾಗಿದ್ದ ಅಕ್ಕಿಗೆ ರಾಜ್ಯ ಸರ್ಕಾರದ ಕ್ರಮ ಬದ್ಧವಲ್ಲದ ನೀತಿ ನಿರೂಪಣೆಯಿಂದಾಗಿ ಕತ್ತರಿ ಬಿದ್ದಿದೆ. ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆಯ ಸಾರ್ವಜನಿಕ ಪಡಿತರ ವ್ಯವಸ್ಥೆಯಡಿ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ದಾರರಿಗೆ ಉಚಿತವಾಗಿ ಪಡಿತರ ವಿತರಿಸುವಂತೆ ಎಪಿಎಲ್ ಕಾರ್ಡ್‌ದಾರರಿಗೂ ನಿರ್ದಿಷ್ಟ ದರದಲ್ಲಿ ನಿರ್ದಿಷ್ಟ ಪ್ರಮಾಣದ ಅಕ್ಕಿಯನ್ನು ಈ ಹಿಂದಿನಿಂದಲೂ ಪ್ರತೀ ತಿಂಗಳು ವಿತರಣೆ ಮಾಡಲಾಗುತ್ತಿತ್ತು. ಆದರೆ ಕಳೆದ ಕೆಲವು ತಿಂಗಳಿನಿಂದ ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಎಪಿಎಲ್ ಕಾರ್ಡ್‌ದಾರರಿಗೆ ಸರಿಯಾಗಿ ಅಕ್ಕಿ ಪೂರೈಕೆಯಾಗುತ್ತಿಲ್ಲ.

ದ.ಕ. ಜಿಲ್ಲೆಯ ಬಹುತೇಕ ಎಲ್ಲ ತಾಲೂಕುಗಳಲ್ಲೂ ಎಪಿಎಲ್ ಕಾರ್ಡ್‌ದಾರರಿಗೆ ಅಕ್ಕಿಯ ಕೊರತೆಯಿದೆ ಎಂಬ ಮಾಹಿತಿಯು ಈಗಾಗಲೇ ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ರಾಜ್ಯ ಸರ್ಕಾರದಿಂದ ಸೂಕ್ತ ಸ್ಪಂದನೆ ಇಲ್ಲದ ಕಾರಣ ಎಪಿಎಲ್ ಕಾರ್ಡ್‌ದಾರರಿಗೆ ಅಕ್ಕಿ ಸಿಗುವುದೋ, ಇಲ್ಲವೋ, ಎಂಬ ಗೊಂದಲ ಮೂಡಿ ಪ್ರತಿನಿತ್ಯ ನ್ಯಾಯಬೆಲೆ ಅಂಗಡಿಗೆ ಅಲೆಯುವ ಅಥವಾ ಪಡಿತರಕ್ಕಾಗಿ ಸರತಿ ಸಾಲಿನಲ್ಲಿ ನಿಂತು ಪರದಾಡುವಂತಾಗಿದೆ. ಕೆಲವು ಪಡಿತರ ಅಂಗಡಿಗಳಲ್ಲಂತೂ ಎಪಿಎಲ್ ಕಾರ್ಡ್‌ದಾರರಿಗೆ ಅಕ್ಕಿ ಇಲ್ಲ ಎಂಬ ಫಲಕ ಹಾಕಿರುವ ದೂರುಗಳು ನನಗೆ ಬಂದಿವೆ. ಸಾರ್ವಜನಿಕರನ್ನು ಇಂತಹ ಸ್ಥಿತಿಗೆ ತಳ್ಳಿದ ರಾಜ್ಯ ಸರಕಾರ ಜನಾಕ್ರೋಶಕ್ಕೆ ತುತ್ತಾಗುವ ದಿನಗಳು ದೂರ ಇಲ್ಲ. ಅದಕ್ಕೂ ಮೊದಲು ಸರ್ಕಾರ ಎಚ್ಚೆತ್ತುಕೊಳ್ಳಲಿ ಎಂದು ಶಾಸಕರು ಎಚ್ಚರಿಸಿದರು.