LATEST NEWS
ದಕ್ಷಿಣಕನ್ನಡ ಜಿಲ್ಲೆಗೆ 300 ಕೋಟಿ ರೂಪಾಯಿ ವಿಶೇಷ ಪ್ಯಾಕೆಜ್ ನೀಡಿ – ಶಾಸಕ ವೇದವ್ಯಾಸ್ ಕಾಮತ್

ಮಂಗಳೂರು ಅಗಸ್ಟ್ 03: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಸುರಿದ ಭಾರೀ ಮಳೆಯಿಂದಾಗಿ ಮಂಗಳೂರು ನಗರ ದಕ್ಷಿಣ ಕ್ಷೇತ್ರವೂ ಸೇರಿದಂತೆ ಅಪಾರ ಪ್ರಮಾಣದ ಹಾನಿಯಾಗಿದ್ದು ಜಿಲ್ಲೆಯ ಜನತೆ ಮತ್ತೆ ಬದುಕು ಕಟ್ಟಿಕೊಳ್ಳಲು ಅನುವಾಗುವಂತೆ 300 ಕೋಟಿ ರೂಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಸರ್ಕಾರವನ್ನು ಶಾಸಕ ವೇದವ್ಯಾಸ್ ಕಾಮತ್ ಅವರು ಒತ್ತಾಯಿಸಿದರು.
ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನಿರಂತರ ಮಳೆಯಿಂದಾಗಿ ಹಲವಾರು ಮನೆಗಳು ಕುಸಿದಿದ್ದು, ಮನೆಗಳ ಮೇಲೆ ಬೃಹತ್ ಮರ ಉರುಳಿದ್ದು, ಮನೆಯೊಳಗೆ ಪ್ರವಾಹದ ನೀರು ನುಗ್ಗಿದ್ದು, ಗುಡ್ಡ ಕುಸಿತ, ರಸ್ತೆ, ಚರಂಡಿ, ತಡೆಗೋಡೆ, ರಾಜ ಕಾಲುವೆಗಳಿಗೆ ಹಾನಿ, ಹೀಗೆ ಹತ್ತು ಹಲವು ರೀತಿಯಲ್ಲಿ ಜನಸಾಮಾನ್ಯರ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ಹಾನಿಗೊಳಗಾಗಿ ಮೇಲ್ನೋಟಕ್ಕೆ ಸುಮಾರು 300 ಕೋಟಿಗೂ ಅಧಿಕ ನಷ್ಟವಾಗಿದ್ದು ಕಂಡು ಬರುತ್ತಿದೆ.

ರಾಜ್ಯದ ಮುಖ್ಯಮಂತ್ರಿಗಳು ನಿನ್ನೆಯಷ್ಟೇ, ಇಂತಹ ದುರಂತದಲ್ಲಿ ಪೂರ್ಣ ಮನೆ ಹಾನಿಯಾಗಿದ್ದರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಯಮದ ಪ್ರಕಾರ 1.20 ಲಕ್ಷ ಮಾತ್ರ, ಭಾಗಶಃ ಮನೆ ಹಾನಿಗೆ 50,000 ಮಾತ್ರ ಪರಿಹಾರ ನೀಡಲಾಗುವುದು ಎಂದು ಘೋಷಿಸಿದ್ದಾರೆ. ಮನೆಯೊಳಗೆ ಪ್ರವಾಹದ ನೀರು ನುಗ್ಗಿದರೆ ಯಾವುದೇ ಪರಿಹಾರದ ಬಗ್ಗೆ ಉಲ್ಲೇಖಿಸಿಲ್ಲ. ಉಸ್ತುವಾರಿ ಮಂತ್ರಿಗಳು ಹೆಚ್ಚಿನ ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ. ಆದರೆ ಆ ಹೆಚ್ಚಿನ ಪರಿಹಾರ ಘೋಷಣೆಯಾಗುವುದು ಯಾವಾಗ? ಸಂತ್ರಸ್ತರಿಗೆ ತಲುಪುವುದು ಯಾವಾಗ? ಎಂಬುದೇ ದೊಡ್ಡ ಪ್ರಶ್ನೆ ಎಂದರು.
ಈ ಹಿಂದೆ ಮಾನ್ಯ ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಕೆಲವೇ ದಿನಗಳಲ್ಲಿ, ಇನ್ನೂ ಸಚಿವ ಸಂಪುಟವೇ ರಚನೆಯಾಗದಂತಹ ಸಂದರ್ಭದಲ್ಲಿ ಇಂತಹ ಪ್ರಕೃತಿ ವಿಕೋಪದ ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಸಹಿತ ಇಡೀ ರಾಜ್ಯವನ್ನು ಸುತ್ತಿ ಸಮೀಕ್ಷೆ ನಡೆಸಿ ಪೂರ್ಣ ಮನೆ ಹಾನಿಯಾಗಿದ್ದರೆ 5 ಲಕ್ಷ, ಭಾಗಶಃ ಮನೆಗೆ ಹಾನಿಯಾಗಿದ್ದರೆ 2.50 ಲಕ್ಷ, ಅಷ್ಟೇ ಅಲ್ಲದೆ ಮನೆಯೊಳಗೆ ಪ್ರವಾಹದ ನಾಯಕನಾಗಿರುವಂತಹ ಶ್ರೀ ಆರ್ ಅಶೋಕ್ ರವರು ಕಂದಾಯ ಸಚಿವರಾಗಿದ್ದ ಸಂದರ್ಭದಲ್ಲಿ ಮಳೆ ಹಾನಿಯಿಂದಾದ ನಷ್ಟಕ್ಕೆ ಕೇಂದ್ರ ಸರ್ಕಾರದ ನೆರವಿಗೆ ಕಾಯದೇ ರಾಜ್ಯ ಸರ್ಕಾರದ ವತಿಯಿಂದಲೇ ಪರಿಹಾರ ನೀಡುವಂತೆ ಕ್ರಮ ಕೈಗೊಳ್ಳಲಾಗಿತ್ತು ಈಗಿನ ಸರ್ಕಾರದಂತೆ ಕೇಂದ್ರ ಸರ್ಕಾರದ ನೆರವಿಗೆ ಕಾಯಲಿಲ್ಲ. ಪ್ರಕೃತಿ ವಿಕೋಪ ಸಂದರ್ಭದಲ್ಲಿ ದನ-ಕರು-ಕುರಿ ಸಹಿತ ಸಾಕುಪ್ರಾಣಿಗಳು ಮೃತಪಟ್ಟಲ್ಲಿ NDRF ವತಿಯಿಂದ ನೀಡುವ ಪರಿಹಾರದ ಜೊತೆಗೆ ನೀರು ನುಗ್ಗಿದ್ದರೆ 10,000 ಪರಿಹಾರ ಘೋಷಿಸಿದ್ದರು. ಇದರಿಂದಾಗಿ ನೈಸರ್ಗಿಕ ವಿಕೋಪದಿಂದ ಬದುಕು ಕಳೆದುಕೊಂಡವರ ಬಾಳಲ್ಲಿ ಹೊಸ ಭರವಸೆ ಮೂಡಿಸುತ್ತಿತ್ತು. ಈಗಿನ ಸರ್ಕಾರ ದಿವಾಳಿ ಹಂತದಲ್ಲಿದ್ದು ಸರ್ಕಾರದ ಪರಿಹಾರ ಬಿಡಿ, ಕೊನೆಪಕ್ಷ NDRF ವತಿಯಿಂದ ನೀಡಲಾಗುವ ಪರಿಹಾರವಾದರೂ ನೀಡಲಿ ಎಂದು ಆಗ್ರಹಿಸಿದರು.
ಇಷ್ಟೆಲ್ಲಾ ಅನಾಹುತ ಸಂಭವಿಸಿದ್ದರೂ ರಾಜ್ಯದ ಮುಖ್ಯಮಂತ್ರಿಗಳು ಈವರೆಗೂ ಜಿಲ್ಲೆಗೆ ಭೇಟಿ ನೀಡಿಲ್ಲ. ಮೂಡ ಭ್ರಷ್ಟಾಚಾರದ ಹಗರಣದಲ್ಲಿ ಸಿಲುಕಿರುವ ಅವರು ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳುವುದರಲ್ಲೇ ನಿರತರಾಗಿದ್ದಾರೆ. ಎಲ್ಲವನ್ನೂ ಕಳೆದುಕೊಂಡು ಕಣ್ಣೀರಿಡುತ್ತಿರುವ ಜನರು ಸರ್ಕಾರದ ಮುಂದೆ ಪರಿಹಾರ ಹೆಚ್ಚಿಸಿ ಎಂದು ಅಂಗಲಾಚಬೇಕೆಂದು ಸರ್ಕಾರ ಬಯಸುತ್ತಿದೆಯೇ? ಇಂತಹ ಸಂದರ್ಭಗಳಲ್ಲಿ ಪರಿಹಾರ ನೀಡುವ ವಿಷಯದಲ್ಲಿಯೂ ಸರ್ಕಾರ ಹೀಗೆ ವರ್ತಿಸಿದರೆ ಜನರು ಎಲ್ಲಿಗೆ ಹೋಗಬೇಕು? ಯಾರ ಬಳಿ ಸಹಾಯ ಕೇಳಬೇಕು? ರಾಜ್ಯದಲ್ಲಿ ಎಲ್ಲದರ ಬೆಲೆ ಏರಿಸುತ್ತಾ ಜೇಬು ತುಂಬಿಸಿಕೊಳ್ಳುತ್ತಿರುವ ಸರ್ಕಾರ, ಪರಿಹಾರದ ವಿಷಯದಲ್ಲಿ ಜನಸಾಮಾನ್ಯರಿಗೆ ಅನ್ಯಾಯವೆಸಗುತ್ತಿರುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಮಳೆ ಹಾನಿಯ ಬಗ್ಗೆ ಸಮೀಕ್ಷೆಯನ್ನು ನಡೆಸಿ ಹೋಗಿದ್ದಾರೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳೇ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಳೆ ಹಾನಿಯ ಬಗ್ಗೆ ಸಭೆ ನಡೆಸಿ ಹೋಗಿದ್ದರು. ಆ ಸಭೆಯಲ್ಲಿ ಶಾಸಕರಿಂದ ಹಿಡಿದು ಹಲವು ಅಧಿಕಾರಿಗಳು ಮಳೆ ಹಾನಿಯಿಂದ ಉಂಟಾಗಿರುವ ಅನೇಕ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದರು. ಆ ಸಮಸ್ಯೆಗಳಿಗೆ ಈವರೆಗೆ ಯಾವ ಪರಿಹಾರ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ದಯವಿಟ್ಟು ರಾಜ್ಯ ಸರ್ಕಾರ ಸಹಿತ ಜಿಲ್ಲೆಯ ಯಾವುದೇ ಒಬ್ಬ ಕಾಂಗ್ರೆಸ್ ನಾಯಕರು ಮಾಹಿತಿ ಪಡೆದುಕೊಂಡು ಉತ್ತರಿಸಿಲಿ. ವಾಸ್ತವದಲ್ಲಿ ಆ ಎಲ್ಲಾ ಸಮಸ್ಯೆಗಳು ಇನ್ನೂ ಕೂಡಾ ಹಾಗೆಯೇ ಇವೆ.!
ಕಳೆದ 15 ತಿಂಗಳಿನಿಂದಲೂ ಸರ್ಕಾರ ಮಂಗಳೂರು ನಗರ ದಕ್ಷಿಣವೂ ಸೇರಿದಂತೆ ಇಡೀ ಜಿಲ್ಲೆಗೆ ಒಂದು ಪೈಸೆ ಅನುದಾನವನ್ನೂ ಕೊಟ್ಟಿಲ್ಲ. ಕೊನೆಪಕ್ಷ ಪ್ರಕೃತಿ ವಿಕೋಪದಂತಹ ಈ ಸಂದರ್ಭದಲ್ಲಾದರೂ ಜಿಲ್ಲೆಗೆ ನ್ಯಾಯವಾಗಿ ಸಿಗಬೇಕಿರುವ ಅನುದಾನವನ್ನು ಬಿಡುಗಡೆಗೊಳಿಸಿದರೆ ತ್ವರಿತಗತಿಯಲ್ಲಿ ಈ ಹಿಂದಿನಂತೆ ಜಿಲ್ಲೆ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ. ಕೊನೆಪಕ್ಷ ನಮ್ಮ ಜಿಲ್ಲೆಯ ತೆರಿಗೆಯ ದುಡ್ಡನ್ನಾದರೂ ಮರಳಿ ನೀಡಿ ಅಭಿವೃದ್ಧಿಗೆ ಸಹಕಾರ ನೀಡಿ. ಅಲ್ಲದೇ ಕೇವಲ ಕಾಟಾಚಾರಕ್ಕೆ ನಡೆಸುವ ಸಮೀಕ್ಷೆಯಿಂದ ಜಿಲ್ಲೆಗೆ ಏನೂ ಉಪಯೋಗವಿಲ್ಲ. ದಯವಿಟ್ಟು ಕಳೆದ ಬಾರಿಯಂತೆ ಈ ಬಾರಿಯೂ ಜಿಲ್ಲೆಗೆ ಅನ್ಯಾಯವೆಸಗದೇ ಕೂಡಲೇ 300 ಕೋಟಿ ರೂಗಳ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಜಗತ್ತೇ ಕಂಡು ಕೇಳರಿಯದ ಕೊರೋನ ದಂತಹ ಸಾಂಕ್ರಾಮಿಕ ಕಾಯಿಲೆಯನ್ನೇ ಯಶಸ್ವಿಯಾಗಿ ನಿರ್ವಹಿಸಿದ ಬಿಜೆಪಿ ಸರ್ಕಾರದ ಉದಾಹರಣೆ ಕಣ್ಣ ಮುಂದಿರುವಾಗ ಜಿಲ್ಲೆಯಲ್ಲಿ ಎಷ್ಟೋ ವರ್ಷಗಳಿಂದ ಇರುವ ಡೆಂಗ್ಯೂ ನಿಯಂತ್ರಣದಲ್ಲಿ ರಾಜ್ಯ ಸರ್ಕಾರದ ಸಂಪೂರ್ಣ ವಿಫಲವಾಗಿದ್ದು ಜಿಲ್ಲೆಯಲ್ಲಿ ನಿಖರವಾಗಿ ಎಷ್ಟು ಡೆಂಗ್ಯೂ ಪ್ರಕರಣಗಳಿವೆ ಎಂಬುದೇ ತಿಳಿಯುತ್ತಿಲ್ಲ. ಅಷ್ಟರಮಟ್ಟಿಗೆ ಡೆಂಗ್ಯೂ ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು ಬೇಜವಾಬ್ದಾರಿತನಕ್ಕೆ ಉದಾಹರಣೆಯಾಗಿದೆ ಎಂದು ಇದೇ ಸಂದರ್ಭದಲ್ಲಿ ಬೇಸರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಡಲದ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ಲಲ್ಲೇಶ್, ರಮೇಶ್ ಹೆಗ್ಡೆ, ಮನಪಾ ಸದಸ್ಯೆ ಪೂರ್ಣಿಮಾ, ಪ್ರಮುಖರಾದ ಸಂಜಯ್ ಪ್ರಭು, ನಿತಿನ್ ಕುಮಾರ್, ರವಿಶಂಕರ್ ಮಿಜಾರ್ ಉಪಸ್ಥಿತರಿದ್ದರು.