LATEST NEWS
ರಾಮನವಮಿ ಕಾರ್ಯಕ್ರಮದ ವೇಳೆ ಈ ರೀತಿ ಮಾಡುವುದು ಶಾಸಕ ವೇದವ್ಯಾಸ್ ಕಾಮತ್ ರಿಗೆ ಶೋಭೆ ತರುವಂತದಲ್ಲ – ವಿಶ್ವಾಸ್‌ದಾಸ್
ಮಂಗಳೂರು ಎಪ್ರಿಲ್ 18: ಮಂಗಳೂರಿನ ಚಿಲಿಂಬಿಯ ಬಳಿ ಇರುವ ಸಾಯಿಬಾಬಾ ಮಂದಿರ ಬಳಿ ಶಾಸಕ ವೇದವ್ಯಾಸ್ ಕಾಮತ್ ಮತಯಾಚನೆ ಮಾಡಲು ಹೋಗಿದ್ದ ವೇಳೆ ಮಂದಿರದ ಮೊಕ್ತೇಸರ ವಿಶ್ವಾಸ್‌ದಾಸ್ ಹಾಗೂ ಶಾಸಕ ಕಾಮತ್ ನಡುವೆ ಮಾತಿನ ಚಕಮಕಿ ನಡೆದ ಘಟನೆ ನಡೆದಿದೆ.
ಸಾಯಿ ಬಾಬಾ ಮಂದಿರದಲ್ಲಿ ರಾಮನಮಮಿ ಪ್ರಯುಕ್ತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ವೇದವ್ಯಾಸ ಕಾಮತ್ ಅವರು ಪಕ್ಷದ ಕಾರ್ಯಕರ್ತರ ಜೊತೆ ಅಲ್ಲಿಗೆ ಮತ ಯಾಚಿಸಲು ತೆರಳಿದ್ದರು. ಆಗ ವಿಶ್ವಾಸದಾಸ್, ‘ಮಂದಿರದ ಬಳಿ ನೀವು ಮತ ಯಾಚಿಸುವುದು ಬೇಡ. ನಾವೂ ಯಾವ ಪಕ್ಷಕ್ಕೂ ಮತ ಯಾಚಿಸಲು ಅವಕಾಶ ನೀಡಿಲ್ಲ. ನೀವು ಬೇಕಿದ್ದರೆ ಬೇರೆ ಕಡೆ ಮತ ಕೇಳಿ’ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ‘ಇದು ಸರ್ಕಾರದ ಜಾಗ. ಸಾರ್ವಜನಿಕ ಜಾಗದಲ್ಲಿ ಯಾರು ಬೇಕಾದರೂ ಮತ ಯಾಚಿಸಬಾರದು’ ಎಂದು ಏರಿದ ಧ್ವನಿಯಲ್ಲಿ ಹೇಳಿದ್ದರು.
ಇದಕ್ಕೆ ಪ್ರತಿಯಾಗಿ ವಿಶ್ವಾಸ್‌ದಾಸ್, ‘ಕಾರ್ಯಕ್ರಮ ಮಾಡಿ, ನೀವು ಮಾಡಿದ ಕೆಲಸದ ಆಧಾರದಲ್ಲಿ ಮತ ಯಾಚಿಸಿ. ಮನೆ ಮನೆಗೆ ಹೋಗಿ ಮತ ಕೇಳಿ. ನಮ್ಮ ಅಭ್ಯಂತರ ಇಲ್ಲ. ಆದರೆ ದೇವಸ್ಥಾನದ ಜಾಗದಲ್ಲಿ ಮತ ಯಾಚಿಸಲು ಅವಕಾಶ ನೀಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು. ‘ಇದು ನಿಮ್ಮ ರಸ್ತೆಯಾ? ಇದಕ್ಕೆ ಡಾಂಬರು ಹಾಕಿಸಿದ್ದು ನೀವಾ? ನಾವು ನರೇಂದ್ರ ಮೋದಿಯವರು ಸಾಗಿದ ಮಾರ್ಗದಲ್ಲಿ ಮತ ಕೇಳುತ್ತೇವೆ. ರಸ್ತೆಯಲ್ಲಿ ನಿಂತು ಯಾರು ಬೇಕಾದರೂ ಮತ ಕೇಳಬಹುದು’ ಎಂದು ವೇದವ್ಯಾಸ್ ಸಮರ್ಥಿಸಿಕೊಂಡರು.
ಬಳಿಕ ದೇವಸ್ಥಾನದ ಆವರಣದಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಗಲಾಟೆ ಹಂತಕ್ಕೆ ತೆರಳಿತ್ತು.