LATEST NEWS
ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಸಂಪೂರ್ಣ ಕುಸಿತ: ಶಾಸಕ ಕಾಮತ್

ಮಂಗಳೂರು ಜುಲೈ 16 : ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಅಮಾಯಕರ ಸರಣಿ ಹತ್ಯೆಗಳು ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣ ಹದೆಗೆಟ್ಟಿದೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ್ ಕಾಮತ್ ಆರೋಪಿಸಿದ್ದಾರೆ.
ಜೈನ ಮುನಿ ಹತ್ಯೆ, ಬೆಂಗಳೂರಿನಲ್ಲಿ ಖಾಸಗಿ ಕಂಪನಿಯ ಒಳಗೆ ನುಗ್ಗಿ ಜೋಡಿ ಕೊಲೆ, ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಹತ್ಯೆ ಸಹಿತ ಅನೇಕ ಕೊಲೆಗಳು ನಡೆದಿವೆ. ಗೃಹ ಇಲಾಖೆಗೆ ಪೊಲೀಸ್ ಇಲಾಖೆಯ ಮೇಲೆ ಹಿಡಿತ ಇಲ್ಲದಂತಾಗಿದೆ. ಇದರಿಂದ ಸಮಾಜಘಾತುಕ ಶಕ್ತಿಗಳಿಗೆ ಪೊಲೀಸರ ಭಯ ಇಲ್ಲದೇ ಇರುವ ಕಾರಣಕ್ಕೆ ಈ ಎಲ್ಲ ಘಟನೆಗಳು ರಾಜಾರೋಶವಾಗಿ ನಡೆಯುತ್ತಿವೆ. ಸರಕಾರ ತಕ್ಷಣ ಎಚ್ಚೆತ್ತು ಎಲ್ಲ ಅಹಿತಕರ ಘಟನೆಗಳಿಗೆ ಕಡಿವಾಣ ಹಾಕಬೇಕು ಎಂದು ಅವರು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತ ನಡೆಸಿದ ಎಲ್ಲ ಸಂದರ್ಭಗಳಲ್ಲಿ ಹತ್ಯೆಗಳು, ಅಹಿಕರ ಘಟನೆಗಳು, ಕೋಮುಗಲಭೆಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ನಡೆದ ಉದಾಹರಣೆಗೆ ಸಾಕಷ್ಟಿದೆ. ಇದೀಗ ಕಾಂಗ್ರೆಸ್ ಸರಕಾರ ಬಂದು ಒಂದೂವರೆ ತಿಂಗಳಿನಲ್ಲಿ ಇದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಜನಪರ ಆಡಳಿತ ನಡೆಸುವುದು ಬಿಟ್ಟು ವರ್ಗಾವಣೆ ದಂಧೆ ಹಾಗೂ ಇತರ ವಿಷಯಗಳಲ್ಲೇ ಸರಕಾರ ಹೆಚ್ಚು ಆಸಕ್ತಿ ವಹಿಸಿರುವ ಕಾರಣ ರಾಜ್ಯದಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಿದೆ. ತಕ್ಷಣ ಸರಕಾರ ಜನರಿಗೆ ಭಯಮುಕ್ತ ಆಡಳಿತ ನೀಡುವತ್ತ ಗಮನ ಹರಿಸಬೇಕು ಎಂದು ಅವರು ಆಗ್ರಹಿಸಿದರು.