Connect with us

    LATEST NEWS

    ಹಿಂದೂ ವಿರೋಧಿ ನೀತಿ ಎನ್ನುವುದು ಕಾಂಗ್ರೆಸ್ಸಿನ ಮೂಲ ಸಿದ್ಧಾಂತ- ಶಾಸಕ ಕಾಮತ್

    ಮಂಗಳೂರು ಜನವರಿ 11: 500 ವರ್ಷಗಳಿಗೂ ಮಿಗಿಲಾದ ಸುಧೀರ್ಘ ಹೋರಾಟದ ನಂತರ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಇಡೀ ಜಗತ್ತಿನ ಹಿಂದೂಗಳ ಆರಾಧ್ಯ ದೈವ ಪ್ರಭು ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆಗೆ ಅಧಿಕೃತ ಆಹ್ವಾನವಿದ್ದರೂ ಭಾಗವಹಿಸುವುದಿಲ್ಲ ಎಂದು ಘೋಷಿಸಿದ ಕಾಂಗ್ರೆಸ್ ತಾನು ಎಂದಿಗೂ ರಾಮ ವಿರೋಧಿ ಎಂಬುದನ್ನು ಬಹಿರಂಗವಾಗಿ ಒಪ್ಪಿಕೊಂಡಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಆಕ್ರೋಶ ವ್ಯಕ್ತಪಡಿಸಿದರು.


    ಇತ್ತೀಚಿಗೆ ದೇಶಾದ್ಯಂತ ರಾಮ ಜಪ ಹೆಚ್ಚುತ್ತಿರುವ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ತಾವು ಕೂಡಾ ರಾಮ ಭಕ್ತರು, ರಾಮ ಮಂದಿರ ನಿರ್ಮಾಣದಲ್ಲಿ ತಮ್ಮದೂ ಕೊಡುಗೆ ಇದೆ, ಎಂದೆಲ್ಲ ಹೇಳಿಕೆ ನೀಡಿದ್ದರು. ಈಗ ಕಾಂಗ್ರೆಸ್ ವರಿಷ್ಠರ ಅಧಿಕೃತ ನಿಲುವಿನಿಂದ ಆ ಪಕ್ಷ ಹಿಂದೂಗಳ ಧಾರ್ಮಿಕ ಭಾವನೆಗೆ ಅದೆಷ್ಟು ಬೆಲೆ ಕೊಡುತ್ತದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಂದು ಗುಜರಾತಿನ ಸೋಮನಾಥ ಮಂದಿರದ ಉದ್ಘಾಟನೆಗೆ ಹೋಗದೇ ನೆಹರೂ ಹಾಕಿಕೊಟ್ಟ ಪರಂಪರೆಯನ್ನೇ ಇಂದು ಕಾಂಗ್ರೆಸ್ ಮುಂದುವರಿಸಿದೆ. ಆ ಮೂಲಕ ಹಿಂದೂ ವಿರೋಧಿ ನೀತಿ ಎನ್ನುವುದು ಕಾಂಗ್ರೆಸ್ಸಿನ ಮೂಲ ಸಿದ್ಧಾಂತವೇ ಆಗಿದೆ ಎಂದು ಹೇಳಿದರು.

    ರಾಮ ಮಾಂಸಾಹಾರಿ, ರಾಮ ಹುಟ್ಟಿಯೇ ಇಲ್ಲ, ಅದೊಂದು ಕೇವಲ ಕಾಲ್ಪನಿಕ ಪಾತ್ರ, ರಾಮ ಯಾವ ಇಂಜಿನಿಯರಿಂಗ್ ಕಾಲೇಜಲ್ಲಿ ಓದಿದ್ದ, ಇತ್ಯಾದಿ ರಾಮ ವಿರೋಧಿ ಹೇಳಿಕೆಗಳನ್ನು ಕೊಟ್ಟಿದ್ದ ಕಾಂಗ್ರೆಸ್ ಸಹಜವಾಗಿ ಮಂದಿರದ ಆಹ್ವಾನ ತಿರಸ್ಕರಿಸಿದೆ. ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ಕಾಂಗ್ರೆಸ್ ನಾಯಕರು ಮಾತ್ರ ನಮಗೆ ಮಂದಿರದ ಆಹ್ವಾನ ಸಿಕ್ಕಿಲ್ಲ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಯಾಕೆ ಈ ದ್ವಂದ್ವ ನಿಲುವು? ಜನರನ್ನು ಮೂರ್ಖರನ್ನಾಗಿಸುವ ಪ್ರಯತ್ನವೇ? ಅಷ್ಟಕ್ಕೂ ನಮ್ಮ ಮನೆಯ ಶುಭ ಕಾರ್ಯಕ್ಕೆ ಯಾರ ಆಹ್ವಾನಕ್ಕೂ ಕಾಯುವ ಅಗತ್ಯವಿಲ್ಲ. ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವುದು ರಾಷ್ಟ್ರ ಮಂದಿರ. ಹಾಗಾಗಿಯೇ ದೇಶದಲ್ಲಿ ಈಗಾಗಲೇ ಹಲವು ಮುಸ್ಲಿಮರು ಅಯೋಧ್ಯೆಗೆ ಪಾದಯಾತ್ರೆ, ದೇಣಿಗೆ, ರಾಮಮಂದಿರಕ್ಕೆ ಪೂಜಾ ಪರಿಕರಗಳು, ಜನವರಿ 22ಕ್ಕೆ ಮಸೀದಿಗಳಲ್ಲಿ ದೀಪ ಬೆಳಗುವ ಮೂಲಕ ರಾಷ್ಟ್ರ ಮಂದಿರದ ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಆದರೆ ಕಾಂಗ್ರೆಸ್ ಮಾತ್ರ ತಮ್ಮ ಯೋಗ್ಯತೆ ಏನು ಮತ್ತು ಎಷ್ಟು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಮತ್ತು ಮೋದಿಯವರನ್ನು ವಿರೋಧಿಸುವ ಭರದಲ್ಲಿ ರಾಮನನ್ನೇ ವಿರೋಧಿಸಲು ಹೊರಟಿದ್ದಾರೆ ಎಂದು ಹೇಳಿದರು.

    ಹಿಂದಿನಿಂದಲೂ ರಾಮನಿಗೆ ಅವಮಾನ ಮಾಡಿಕೊಂಡು ಬಂದಂತಹ ಕಾಂಗ್ರೆಸ್ ಇಡೀ ದೇಶದಲ್ಲಿ ಕೇವಲ ಎರಡಂಕಿ ಸೀಟುಗಳಿಗೆ ಇಳಿದಿತ್ತು. ಈಗ ರಾಮನನ್ನು ತಿರಸ್ಕರಿಸಿರುವ ಇವರನ್ನು ದೇಶದ ಜನರು ಮತ್ತೆ ತಿರಸ್ಕರಿಸಲಿದ್ದಾರೆ. ಕಾಂಗ್ರೆಸ್ ಬೇರೆ ಧರ್ಮದವರ ಧಾರ್ಮಿಕ ಭಾವನೆಗಳಿಗೆ ಬೆಲೆ ಕೊಟ್ಟ ಹಾಗೆ ಹಿಂದೂಗಳ ಧಾರ್ಮಿಕ ಭಾವನೆಗಳಿಗೂ ಬೆಲೆ ಕೊಟ್ಟು ಜಾತ್ಯಾತೀತತೆಯಿಂದ ನಡೆದುಕೊಳ್ಳಬೇಕಿತ್ತು. ಕೇವಲ ಅಲ್ಪಸಂಖ್ಯಾತರ ಮತಕ್ಕಾಗಿ ಹಿಂದೂಗಳ ಹಾಗೂ ರಾಮನ ವಿರುದ್ಧ ಕಾಂಗ್ರೆಸ್ ಅದೆಷ್ಟು ಕೀಳು ಮಟ್ಟಕ್ಕೆ ಇಳಿಯುತ್ತದೆ ಎಂಬುದನ್ನು ಇನ್ನಾದರೂ ಹಿಂದೂಗಳು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *