LATEST NEWS
ಹಿರಿಯ ವಿದ್ವಾಂಸ ಡಾ. ವಾಮನ ನಂದಾವರ ಇನ್ನಿಲ್ಲ

ಮಂಗಳೂರು ಮಾರ್ಚ್ 15: ಕನ್ನಡದ ಹಿರಿಯ ವಿದ್ವಾಂಸ ಡಾ. ವಾಮನ ನಂದಾವರ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ಅವರು ಕಳೆದ ಕೆಲ ವರ್ಷಗಳಿಂದ ಅನಾರೋಗ್ಯಪೀಡಿತರಾಗಿದ್ದರು.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಂದಾವರ ಗ್ರಾಮದ ಇವರು ಕನ್ನಡ ಹಾಗೂ ತುಳು ಭಾಷಾ ವಿದ್ವಾಂಸ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾಗಿದ್ದರು.
ಕನ್ನಡ ಮತ್ತು ತುಳು ಭಾಷೆಯ ವಿದ್ವಾಂಸರಾಗಿರುವ ವಾಮನ ನಂದಾವರ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ನಂದಾವರ ಗ್ರಾಮದವರು. ಮಂಗಳೂರು ಸಂತ ಅಲೋಶಿಯಸ್ ಕಾಲೇಜು ಬಿ.ಎಸ್‌ಸಿ ಪದವಿ ಪಡೆದ ಅವರು ಮಂಗಳೂರು ಸರಕಾರಿ ಮಹಾವಿದ್ಯಾಲಯದಲ್ಲಿ ಬಿ.ಇಡಿ ಪದವಿ ಪೂರ್ಣಗೊಳಿಸಿದರು. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಎಂ.ಎ (ಕನ್ನಡ) ಪದವೀಧರರಾದ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಎ.ವಿವೇಕ ರೈಯವರ ಮಾರ್ಗದರ್ಶನದಲ್ಲಿ ‘ಕೋಟಿ ಚೆನ್ನಯ ಜಾನಪದೀಯ ಅಧ್ಯಯನ’ ಮಹಾ ಪ್ರಬಂಧಕ್ಕೆ ಪಿಎಚ್.ಡಿ ಪದವಿ ಗಳಿಸಿದರು.

ಬೆಂಗಳೂರುದ ಚನ್ನೇನಹಳ್ಳಿ ಜನಸೇವಾ ವಿದ್ಯಾಕೇಂದ್ರದಲ್ಲಿ ಸಹಾಯಕ ಅಧ್ಯಾಪಕರಾಗಿ ಶಿಕ್ಷಣ ವೃತ್ತಿ ಜೀವನ ಆರಂಭಿಸಿದ ಅವರು ಸೇಂಟ್ ಆನ್ಸ್ ಪ್ರೌಢಶಾಲೆಯ ಸಹಾಯಕ ಅಧ್ಯಾಪಕರಾಗಿ, ಸೇಂಟ್ ಆನ್ಸ್ ಮಹಿಳಾ ಶಿಕ್ಷಕ-ಶಿಕ್ಷಣ ತರಬೇತಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿ, ಸಹ್ಯಾದ್ರಿ ಶಿಕ್ಣಣ ಸಂಸ್ಥೆಯ ಸ್ಥಾಪಕ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇಂದಿರಾ ಗಾಂಧಿ ರಾಷ್ತ್ರೀಯ ಮುಕ್ತ ವಿಶ್ವವಿದ್ಯಾಲಯದ ಅಧ್ಯಯನ ಮಾರ್ಗದರ್ಶಕರಾಗಿದ್ದ ಅವರು ಪಿಲಿಕುಳ ನಿಸರ್ಗಧಾಮದ ಯೋಜನಾಧಿಕಾರಿ ಹಾಗೂ ಮಂಗಳೂರು ದರ್ಶನ ಯೋಜನೆಯಲ್ಲಿ ಸಹಾಯಕ ಸಂಪಾದಕರಾಗಿದ್ದಾರೆ.