Connect with us

  LATEST NEWS

  ಉತ್ತರಾಖಂಡ ಚಾರಣ ದುರಂತದಲ್ಲಿ ಕುಂದಾಪುರ ಮೂಲದ ಪದ್ಮನಾಭ ಭಟ್ ಸಾವು

  ಕುಂದಾಪುರ ಜೂನ್ 07: ಉತ್ತರಾಖಂಡದ ಸಹಸ್ತ್ರ ತಾಲ್​ ಶಿಖರಕ್ಕೆ ಟ್ರಕ್ಕಿಂಗ್ ತೆರಳಿದ್ದ ವೇಳೆ ಹವಾಮಾನ ವೈಪರಿತ್ಯದಿಂದ ಉಂಟಾದ ದುರಂತದಲ್ಲಿ ಸಾವನಪ್ಪಿದ ಕರ್ನಾಟಕದ 9 ಮಂದಿಯಲ್ಲಿ ಕುಂದಾಪುರ ಮೂಲದ ಚಾರಣಿಗರೊಬ್ಬರು ಸೇರಿದ್ದಾರೆ.


  ಕುಂದಾಪುರ ತಾಲೂಕಿನ ಕುಂಭಾಶಿ ಮೂಲದ ಪದ್ಮನಾಭ ಭಟ್ ಮೃತಪಟ್ಟವರು. ಚಾರಣಕ್ಕೆ ತೆರಳಿದ್ದ 22 ಜನರ ತಂಡದಲ್ಲಿ ಪದ್ಮನಾಭ ಭಟ್ ಕೂಡ ಇದ್ದರು. ಪದ್ಮನಾಭ ಭಟ್ ಅವರು ಮೂಲತಃ ಕುಂಭಾಶಿಯವರು. ಆದರೆ, ಇವರು ಬೆಂಗಳೂರಿನಲ್ಲಿ ವಾಸವಾಗಿದ್ದರು. ಮೇ 29ರಂದು 22 ಜನರ ತಂಡದೊಂದಿಗೆ ಉತ್ತರಕಾಶಿಯ ಸಹಸ್ತ್ರ ತಾಲ್​ಗೆ ಚಾರಣಕ್ಕೆ ತೆರಳಿದ್ದರು. ಚಾರಣ ಮುಗಿಸಿ ಕೆಳಗೆ ಬರುವಾಗ ಹವಾಮಾನ ವೈಪರಿತ್ಯದಿಂದ ದುರ್ಘಟನೆ ಸಂಭವಿಸಿದೆ.

  ದುರ್ಘಟನೆಯಲ್ಲಿ ಒಟ್ಟು 9 ಜನ ಮೃತಪಟ್ಟಿದ್ದಾರೆ. ಇನ್ನು, ಅಪಾಯಕ್ಕೆ ಸಿಲುಕಿದ್ದ 13 ಜನರನ್ನು ರಕ್ಷಣೆ ಮಾಡಲಾಗಿದ್ದು, ಇವರು ಗುರುವಾರ ರಾತ್ರಿ 9:30ರ ಸುಮಾರಿಗೆ ವಿಮಾನದ ಮೂಲಕ ಬೆಂಗಳೂರಿಗೆ ಬಂದರು. ರಕ್ಷಣಾ ಕಾರ್ಯಚರಣೆ ಉಸ್ತುವಾರಿಗೆ ತೆರಳಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರೂ ಈ ಚಾರಣಿಗರ ಜೊತೆಗೆ ಬಂದಿದ್ದಾರೆ.

  ಕುಂಭಾಶಿಯ ಕೊರವಡಿ ರಸ್ತೆಯಲ್ಲಿರುವ ಶ್ರೀ ಹರಿಹರ ನಿಲಯವು ಮೃತ ಪದ್ಮನಾಭ ಭಟ್ಟರ ಹಿರಿಯರ ಮೂಲ ಮನೆ. ಪ್ರಸ್ತುತ ಇಲ್ಲಿ ಚಿಕ್ಕಪ್ಪನ ಕುಟುಂಬದವರು ವಾಸ್ತವಿಸಿದ್ದಾರೆ. ಕೃಷ್ಣಮೂರ್ತಿ ಭಟ್ -ಸತ್ಯವತಿ ದಂಪತಿಯ ಪುತ್ರ ಪದ್ಮನಾಭ ಭಟ್. ಇವರಿಗೆ ಇಬ್ಬರು ಅಕ್ಕಂದಿರು, ಇಬ್ಬರು ತಂಗಿಯರಿ ದ್ದಾರೆ. ಕೃಷ್ಣಮೂರ್ತಿ ಭಟ್ಟರು ಬೆಂಗಳೂರಿನಲ್ಲೇ ವ್ಯವಹಾರ ನಡೆಸಿಕೊಂಡು ಅಲ್ಲೇ ನೆಲೆಸಿದ್ದರು. ಅಂತೆಯೇ ಪದ್ಮನಾಭ ಭಟ್ಟರ ಹುಟ್ಟು, ಬಾಲ್ಯ, ಪ್ರಾಥಮಿಕ ವಿದ್ಯಾಭ್ಯಾಸ ಬೆಂಗಳೂರಿನಲ್ಲೇ ನಡೆಯಿತು. ವಿವಾಹಿತರಾಗಿ ಓರ್ವ ಪುತ್ರ, ಓರ್ವ ಪುತ್ರಿಯನ್ನು ಹೊಂದಿರುವ ಪದ್ಮನಾಭರಿಗೆ ಪ್ರವಾಸ, ಟ್ರಕ್ಕಿಂಗ್ ಇತ್ಯಾದಿಗಳಲ್ಲಿ ಆಸಕ್ತಿ ಜಾಸ್ತಿ. ಆಗಾಗ ಸಹೋದ್ಯೋಗಿ ಗಳು, ಸ್ನೇಹಿತರೊಡನೆ ದೂರದ ರಮಣೀಯ ಸ್ಥಳಗಳಿಗೆ ಪ್ರವಾಸ ಹೋಗುತ್ತಿರುತ್ತಾರೆ.

  Share Information
  Advertisement
  Click to comment

  You must be logged in to post a comment Login

  Leave a Reply