LATEST NEWS
ಉತ್ತರ ಪ್ರದೇಶ : FIR ದಾಖಲಿಸಿದ್ದ ಶಿಕ್ಷಕ ಕುಟುಂಬ ಮಕ್ಕಳ ಸಮೇತ ಗುಂಡಿಗೆ ಬಲಿ…!!
ಉತ್ತರ ಪ್ರದೇಶ: FIR ದಾಖಲಿಸಿದ ಶಿಕ್ಷಕರೊಬ್ಬರ ಇಡೀ ಕುಟುಂಬವನ್ನು ಇಬ್ಬರು ಮಕ್ಕಳ ಸಮೇತ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಅಮೇಥಿ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.
ಸುನಿಲ್ ಕುಮಾರ್, ಅವರ ಪತ್ನಿ ಪೂನಂ ಮತ್ತು ಅವರ 5 ಮತ್ತು 2 ವರ್ಷದ ಇಬ್ಬರು ಹೆಣ್ಣುಮಕ್ಕಳು ಮೃತ ದುರ್ದೈವಿಗಳಾಗಿದ್ದಾರೆ. ಕುಟುಂಬವು ಅಹೋರ್ವಾ ಭವಾನಿ ಕ್ರಾಸಿಂಗ್ ಬಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಗುರುವಾರ ರಾತ್ರಿ ಕೆಲ ದುಷ್ಕರ್ಮಿಗಳು ಶಿಕ್ಷಕರ ಮನೆಗೆ ಏಕಾಏಕಿ ನುಗ್ಗಿದ್ದು, ಎಲ್ಲರ ಮೇಲೂ ಗುಂಡು ಹಾರಿಸಿ ಕೊಂದು ಸ್ಥಳದಿಂದ ಪರಾರಿಯಾಗಿದ್ದಾರೆ.
ಶಿಕ್ಷಕ ಸುನಿಲ್ ರಾಯ್ ಬರೇಲಿ ಮೂಲದವರಾಗಿದ್ದು, ಅಮೇಥಿಯ ಪನ್ಹೌನಾದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಆಗಸ್ಟ್ 18 ರಂದು ಪೂನಂ ಒಂದು ಕೇಸನ್ನು ದಾಖಲಿಸಿದ್ದರು. ಚಂದನ್ ವರ್ಮಾ ಎಂಬಾತನ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ, 1989 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೆ, ತನಗೆ ಹಾಗೂ ತನ್ನ ಕುಟುಂಬಕ್ಕೆ ಏನೇ ಆದರೂ ಅದಕ್ಕೆ ಚಂದನ್ ವರ್ಮಾ ಹೊಣೆ ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದರು ಎಂದು ತಿಳಿದುಬಂದಿದೆ. ಇದೀಗ ಇಡೀ ಕುಟಂಬ ಗುಂಡೇಟಿನಿಂದ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಚಂದನ್ ವರ್ಮಾಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ದಾಳಿಕೋರರು ಮೃತರಿಗೆ ಪರಿಚಿತರಂತೆ ತೋರುತ್ತಿದೆ. ಪ್ರಾಥಮಿಕ ತನಿಖೆ ವೇಳೆ ಆರೋಪಿಗಳು ಬಲವಂತವಾಗಿ ಮನೆಗೆ ನುಗ್ಗಿದಂತಹ ಯಾವುದೇ ಬೆಳವಣಿಗೆಗಳು ಕಂಡು ಬಂದಿಲ್ಲ ಎಂದು ಪೊಲೀಸ್ ಮಹಾನಿರೀಕ್ಷಕ ಪ್ರವೀಣ್ ಕುಮಾರ್ ಅವರು ಹೇಳಿದ್ದಾರೆ. ಈ ನಡುವೆಗೆ ಘಟನೆಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಂತಾಪ ಸೂಚಿಸಿದ್ದಾರೆ. ಅಮೇಥಿಯಲ್ಲಿ ನಡೆದಿರುವ ಘಟನೆ ಖಂಡನೀಯ ಹಾಗೂ ಕ್ಷಮಿಸಲಾಗದ್ದು. ಮೃತರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ. ಸಂತ್ರಸ್ತರ ಕುಟುಂಬದೊಂದಿಗೆ ಸರ್ಕಾರ ಇದೆ. ಅಪರಾಧಿಗಳನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.