Connect with us

    LATEST NEWS

    ಶರದ್ ಋತುವಿನಲ್ಲಿ ಪಂಚಕರ್ಮದ ಉಪಯೋಗಗಳು

    ಪಂಚಕರ್ಮವು ಆಯುರ್ವೇದದ ಪ್ರಮುಖ ಶೋಧನ ಚಿಕಿತ್ಸಾ ವಿಧಾನಗಳಲ್ಲಿ ಒಂದಾಗಿದೆ. ಶರದ್ ಋತುವಿನಲ್ಲಿ ಅದರ ಪ್ರಯೋಜನಗಳು ಇನ್ನಷ್ಟು ಮುಖ್ಯವೆನೆಸಿಕೊಳ್ಳುತ್ತವೆ. ಶರದ್ ಋತು, ಆಷ್ವಯುಜ ಹಾಗೂ ಕಾರ್ತಿಕ ಮಾಸಗಳನ್ನು ಒಳಗೊಳ್ಳುತ್ತದೆ. ‘ಶರದ್ ಋತು’ ವಿಸರ್ಗ ಕಾಲ ಅಥವಾ ದಕ್ಷಿಣಾಯಣ ಕಾಲದ ಎರಡನೆಯ ಋತು. ವರ್ಷಾ ಋತು ಇದರ ಹಿಂದಿನ ಋತುವಾದರೆ, ಹೇಮಂತ ಇದರ ಮುಂದಿನ ಋತು.

    ಶರದ್ ಋತುವಿನ ಹಿಂದಿನ ಋತುವಾದ ‘ವರ್ಷಾ’ ಋತುವಿನಲ್ಲಿ ಬೀಳುವ ಮಳೆಯ ಕಾರಣ, ವಾತಾವರಣದಲ್ಲಿ ತಂಪು ಇರುತ್ತದೆ. ಹಾಗಾಗಿ ದೇಹವು ಚಳಿಗೆ ಒಗ್ಗಿ ಹೋಗಿರುತ್ತದೆ. ಶರದ್ ಋತುವಿನಲ್ಲಿ ಇದ್ದಕಿದ್ದ ಹಾಗೆ ಬೀಳುವ ಸೂರ್ಯನ ಕಿರಣಗಳ ಕಾರಣ, ಈಗಾಗಲೇ ವರ್ಷಾ ಋತುವಿನಲ್ಲಿ ಸಂಚಯವಾಗಿದ್ದ ಪಿತ್ತ ದೋಷವು, ಶರದ್ ಋತುವಿನಲ್ಲಿ ಬಿಸಿಲಿನ ತಾಪಕ್ಕೆ ವೃದ್ಧಿಯಾಗಿ ಅನೇಕ ಬಗೆಯ ಆರೋಗ್ಯ ಸಮಸ್ಯೆಗಳನ್ನು ಹುಟ್ಟು ಹಾಕುತ್ತದೆ. ಹೀಗೆ ದೇಹದಲ್ಲಿ ವಾತಾವರಣದ ಏರು ಪೇರು, ಅಪಥ್ಯ ಆಹಾರ ವಿಹಾರದ ಕಾರಣದಿಂದ ಉಂಟಾದ ದೋಷಗಳ ವೈಪರೀತ್ಯವನ್ನು ನಿವಾರಿಸಲು ಪಂಚಕರ್ಮದ ಮೊರೆ ಹೋಗಲಾಗುತ್ತದೆ. ಹೀಗೆ ಮಾಡುವುದರಿಂದ ಶರದ್ ಋತುವಿನಲ್ಲಿ ಉಂಟಾದ ಪಿತ್ತ ದೋಷ ಸಂಬಂಧಿ ಆರೋಗ್ಯದ ಏರು ಪೇರನ್ನು ನಿಭಾಯಿಸಲು ಸುಲಭವಾಗುತ್ತದೆ.

    ಶರದ್ ಋತು ಮತ್ತು ಅದರ ದೇಹದ ಮೇಲಿನ ಅಡ್ಡ ಪರಿಣಾಮಗಳು:
    ಈಗಾಗಲೇ ತಿಳಿಸಿದಂತೆ ಶರದ್ ಋತುವಿನಲ್ಲಿ ಪಿತ್ತ ದೋಷದ ತೀವ್ರತೆ ಹೆಚ್ಚಾಗುತ್ತದೆ. ಇದರಿಂದ ಶರೀರದ ತಾಪಮಾನ ಏರಿಕೆಯಾಗುವುದು, ಪಿತ್ತ ದೋಷದಿಂದ ಉಂಟಾಗುವ ಚರ್ಮ ರೋಗದ ಸಮಸ್ಯೆಗಳು, ತಲೆಯ ನೋವು, ಎದೆ ಉರಿ, ಉರಿ ಮೂತ್ರ, ಹೀಗೆ ಪಿತ್ತ ಸಂಬಂಧಿತ ಆರೋಗ್ಯ ಸಮಸ್ಯೆಗಳು ಸಂಭವಿಸುತ್ತವೆ. ಇದನ್ನು ಸರಿಪಡಿಸಲು ಶರದ್ ಋತುವಿನಲ್ಲಿ ಪಂಚಕರ್ಮವು ಅತ್ಯಂತ ಉಪಯುಕ್ತವಾಗಿದೆ. ಅದರಲ್ಲೂ ವಿರೇಚನ ಮತ್ತು ರಕ್ತಮೋಕ್ಷಣವು ಹೆಚ್ಚು ಉಪಯುಕ್ತ.

    ಪಂಚಕರ್ಮದ ಪ್ರಮುಖ ಚಿಕಿತ್ಸಾ ಕ್ರಮಗಳು:
    ಪಂಚಕರ್ಮವು ಐದು ಪ್ರಮುಖ ಶೋಧನ ವಿಧಾನಗಳನ್ನು ಒಳಗೊಂಡಿದೆ:
    1. ವಮನ: ದೇಹದಲ್ಲಿ ಪ್ರಕೋಪಗೊಂಡಿರುವ ಕಫ ದೋಷವನ್ನು ವಾಂತಿಯ ( Therapeutic Vomiting) ಮೂಲಕ ಶರೀರದಿಂದ ಹೊರಹಾಕುವುದು.
    2. ವಿರೇಚನ: ಪಿತ್ತದ ತೀವ್ರತೆಯನ್ನು ಕಡಿಮೆ ಮಾಡಲು ಬೇಧಿಯ ( Therapeutic Purgation) ಮೂಲಕ ಶೋಧನೆ.
    3. ಬಸ್ತಿ: ವಾತ ದೋಷವನ್ನು ನಿವಾರಿಸಲು ನಿರ್ದಿಷ್ಟ ಔಷಧಿಗಳ ಎನಿಮಾ ( Enema).
    4. ನಸ್ಯ: ಮೂಗಿನ ದ್ವಾರದಿಂದ ಔಷಧಗಳನ್ನು ಹಾಯಿಸುವ ಮೂಲಕ ಕಫ ದೋಷವನ್ನು ನಿಯಂತ್ರಿಸುವುದು.
    5. ರಕ್ತಮೋಕ್ಷಣ: ರಕ್ತ ಶೋಧನೆ ಮೂಲಕ ದೋಷಗಳನ್ನು ದೂರ ಮಾಡುವುದು.

    ಶರದ್ ಋತುವಿನಲ್ಲಿ ಪಂಚಕರ್ಮದ ಪ್ರಯೋಜನಗಳು:

    1. ಪಿತ್ತ ಶಮನ:
    ಶರದ್ ಋತುವಿನಲ್ಲಿ ಪಿತ್ತ ದೋಷದ ಹೆಚ್ಚಳ ಸಾಮಾನ್ಯವಾಗಿರುತ್ತದೆ. ಪಂಚಕರ್ಮದ ಮೂಲಕ, ವಿಶೇಷವಾಗಿ ವಿರೇಚನ ಮತ್ತು ರಕ್ತಮೋಕ್ಷಣ ಕ್ರಮಗಳು ಪಿತ್ತದ ವೃದ್ಧಿಯನ್ನು ಶಮನಗೊಳಿಸುತ್ತವೆ. ಇದರಿಂದ ಶರೀರದ ಒಳಗಿನ ತಾಪಮಾನ ಸಮತೋಲನದಲ್ಲಿರುತ್ತದೆ, ಚರ್ಮದ ಉರಿ ಕಡಿಮೆಯಾಗುತ್ತದೆ ಮತ್ತು ತೇಜಸ್ಸು ಹೆಚ್ಚುತ್ತದೆ.

    2. ಪಾಚನಾ ಶಕ್ತಿ (ಜೀರ್ಣಕ್ರಿಯೆ)ಯ ಸಮಸ್ಯೆಗಳ ನಿವಾರಣೆ:
    ಈ ಋತುವಿನಲ್ಲಿ ತೀವ್ರವಾಗುವ ಎದೆ ಉರಿ, ಅಜೀರ್ಣ, ಗ್ಯಾಸ್ ಮತ್ತು ಇತರ ಪಿತ್ತ ಸಂಬಂಧಿ ಜೀರ್ಣಕ್ರಿಯೆಯ ಸಮಸ್ಯೆಗಳನ್ನು ನಿವಾರಿಸಲು ವಿರೇಚನ ಅತ್ಯಂತ ಪರಿಣಾಮಕಾರಿಯಾಗಿರುತ್ತದೆ.

    3. ಚರ್ಮದ ಆರೋಗ್ಯ:
    ಚರ್ಮದ ಸಮಸ್ಯೆಗಳು, ಚರ್ಮದ ಉರಿ, ಮೊಡವೆಗಳು, ಕಪ್ಪು ದಾಗುಲು ಇತ್ಯಾದಿ ಸಮಸ್ಯೆಗಳನ್ನು ರಕ್ತಮೋಕ್ಷಣ ಮತ್ತು ವಿರೇಚನ ಉಪಚಾರಗಳು ನಿವಾರಿಸುತ್ತವೆ. ಪಂಚಕರ್ಮದ ಬಳಿಕ ಚರ್ಮದ ಹೊಳಪಿನಲ್ಲಿ ವೃದ್ಧಿ, ಆರೋಗ್ಯಕರ ಚರ್ಮ ಮತ್ತು ಸುಂದರ ತ್ವಚೆಯು ಲಭ್ಯವಾಗುತ್ತದೆ.

    4. ಮನದ ಶಾಂತಿ ಮತ್ತು ಉತ್ಸಾಹ:
    ಶರದ್ ಋತುವಿನಲ್ಲಿ ಪಿತ್ತದ ತೀವ್ರತೆಯ ಪರಿಣಾಮವಾಗಿ ಮಾನಸಿಕ ಅಶಾಂತಿ, ಕಳವಳ, ಮತ್ತು ಆತಂಕ ಹೆಚ್ಚಾಗಬಹುದು.
    ವಿರೇಚನದಂತಹ ಶೋಧನಾ ಕ್ರಮಗಳು ಮಾನಸಿಕ ಅಸ್ಥಿರತೆಗಳನ್ನು ಶಮನಗೊಳಿಸಿ, ಮನಸ್ಸಿಗೆ ಶಾಂತಿ ನೀಡುತ್ತವೆ.

    5. ಸ್ನಾಯುಗಳ ನಯಗೊಳ್ಳುವಿಕೆ ಮತ್ತು ಶಕ್ತಿಯ ವೃದ್ಧಿ:
    ವಿರೇಚನದ ಮೂಲಕ ಪಿತ್ತದ ಶೋಧನೆಯಿಂದ (ಶಮನದಿಂದ) ಕೀಲು ನೋವು, ಸ್ನಾಯುಗಳಲ್ಲಿ ಉರಿ ಮತ್ತು ಇನ್ನೂ ಹಲವು ತರದ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು.
    ವಿರೇಚನದ ನಂತರ, ಶರೀರವು ಸೂಕ್ಷ್ಮವಾಗುತ್ತೆ ಮತ್ತು ನಿತ್ಯದ ಚಟುವಟಿಕೆಗಳಲ್ಲಿ ದೈಹಿಕ ಶಕ್ತಿಯು ವೃದ್ಧಿಯಾಗುತ್ತದೆ.

    6. ರೋಗನಿರೋಧಕ ಶಕ್ತಿಯ ವೃದ್ಧಿ:
    ಪಂಚಕರ್ಮವು ದೇಹದ ವ್ಯವಸ್ಥೆಯನ್ನು ಶುದ್ಧೀಕರಿಸಿ, ಹೊಸ ಶಕ್ತಿಯನ್ನು ತುಂಬುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ ಮತ್ತು ದೇಹವನ್ನು ದೃಢಗೊಳಿಸುತ್ತದೆ.

    7. ಪಿತ್ತದ ಸಮಸ್ಯೆಗಳನ್ನು ತಡೆಯುವುದು:
    ನಿಯಮಿತ ಪಂಚಕರ್ಮದ ಸಹಾಯದಿಂದ ಪಿತ್ತ ಸಂಬಂಧಿತ ಸಮಸ್ಯೆಗಳು ಕಡಿಮೆಯಾಗುತ್ತವೆ. ಶರದ್ ಋತುವಿನ ಅಂತ್ಯದವರೆಗೆ ದೇಹವು ಪಿತ್ತದ ತೀವ್ರತೆಯನ್ನು ಸಹಿಸಿಕೊಳ್ಳುವ ಸಾಮರ್ಥ್ಯವನ್ನು ಪಡೆಯುತ್ತದೆ ಮತ್ತು ಮುಂದೆ ಬರುವ ಹೇಮಂತ ಹಾಗು ಶಿಶಿರ ಋತುವಿನಲ್ಲಿ ಉಂಟಾಗಬಹುದಾದ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ.

    ಶರದ್ ಋತುವಿನಲ್ಲಿ ಪಂಚಕರ್ಮದ ಅನುಸರಣೆ:
    ಈ ಋತುವಿನಲ್ಲಿ ಪಂಚಕರ್ಮವನ್ನು ಆಯುರ್ವೇದ ವೈದ್ಯರ ಮೇಲ್ವಿಚಾರಣೆಯಲ್ಲಿ ಮಾಡುವುದು ಉತ್ತಮ.

    ಆಹಾರ ಮತ್ತು ಜೀವನಶೈಲಿಯ ತೀರ್ಮಾನ:
    ಪಂಚಕರ್ಮದ ನಂತರ ಸರಿಯಾದ ಆಹಾರ ಮತ್ತು ದಿನ ನಿತ್ಯದ ಜೀವನಶೈಲಿಯ ಸೂತ್ರಗಳನ್ನು ಪಾಲಿಸುವುದು ಬಹಳ ಮುಖ್ಯ. ಶರದ್ ಋತುವಿನಲ್ಲಿ ಶೀತಲವಾದ ಆಹಾರಗಳು, ಹಸಿವನ್ನು ತೀರಿಸುವ ಅಹಾರಗಳು ಉಪಯುಕ್ತ. ತಾಜಾ ಹಣ್ಣುಗಳು, ಹಸಿರು ಸಸ್ಯಗಳು, ಪಿತ್ತ ಶಮನ ಮಾಡುವ ಆಹಾರಗಳನ್ನು ಬಳಸುವುದು ಶರೀರದ ಒಳಗಿನ ಸಮತೋಲನವನ್ನು ಕಾಪಾಡಲು ಸಹಾಯಕ.

    ಪಿತ್ತ ಶಮನಕ್ಕೆ ಸೂಕ್ತವಾದ ಆಯುರ್ವೇದ ಔಷಧಿಗಳು:
    ಪಂಚಕರ್ಮದ ಜೊತೆಗೆ ಪಿತ್ತದ ಶಮನಕ್ಕಾಗಿ ಆಯುರ್ವೇದದ ಕೆಲವು ಔಷಧಿಗಳನ್ನು ಬಳಸಬಹುದು. ಅದರಲ್ಲಿ ಮುಖ್ಯವಾದುದು ತಿಕ್ತ ಘೃತ.

    ಆಹಾರ ಕ್ರಮ :
    – ಅಕ್ಕಿ, ಬಾರ್ಲಿ, ಗೋಧಿಯ ಬಳಕೆ
    – ಮಧುರ ರಸ ಪ್ರಧಾನ ಆಹಾರ ಮತ್ತು ಔಷಧಿಯ ಬಳಕೆ
    – ಮಧುರ, ತಿಕ್ತ ರಸಯುಕ್ತ ಆಹಾರದ ಸೇವನೆ

    ತ್ಯಜಿಸಬೇಕಾದ ಆಹಾರಗಳು:
    – ಕ್ಷಾರ, ಅತಿಯಾದ ಉಪ್ಪು ಮತ್ತು ಹುಳಿ ಇರುವ
    ಆಹಾರಗಳು
    – ಸಾಸಿವೆ ಎಣ್ಣೆ ಮತ್ತು ಮೀನಿನ ಸೇವನೆ

    ಶರದ್ ಋತುವಿನಲ್ಲಿ ಪಂಚಕರ್ಮವು ದೇಹದ ಶೋಧನೆ, ದೋಷಗಳ ಸಮತೋಲನ, ಮತ್ತು ಶ್ರೇಷ್ಠ ಆರೋಗ್ಯವನ್ನು ಪಡೆಯಲು ಅತ್ಯುತ್ತಮವಾದ ವಿಧಾನವಾಗಿದೆ. ದೇಹದ ಮತ್ತು ಮನಸ್ಸಿನ ಶುದ್ಧೀಕರಣವು ಶರದ್ ಋತುವಿನಲ್ಲಿ ಆಧ್ಯಾತ್ಮ ಚಿಂತನೆಗೂ ಸಹಾಯ ಮಾಡುತ್ತದೆ.

    ಡಾ ಮಾನಸ ಶ್ರೀನಿವಾಸ್
    ಹಿರಿಯ ವೈದ್ಯರು, ಈಜೀ ಆಯುರ್ವೇದ ಆಸ್ಪತ್ರೆ,
    ಮೊರ್ಗನ್ಸ್ ಗೇಟ್, ಮಂಗಳೂರು

    Share Information
    Advertisement
    Click to comment

    You must be logged in to post a comment Login

    Leave a Reply