LATEST NEWS
ಯು.ಎಸ್ ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟಿಸಿದ ಶಾಸಕ ಕಾಮತ್
ಯು.ಎಸ್ ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟಿಸಿದ ಶಾಸಕ ಕಾಮತ್
ಮಂಗಳೂರು ಜೂನ್ 1: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶ್ರೀ ಯು.ಎಸ್ ಮಲ್ಯ ಒಳಾಂಗಣ ಕ್ರೀಡಾಂಗಣ ಸಂಕೀರ್ಣದಲ್ಲಿ ಸಂಪೂರ್ಣಗೊಂಡ ಕಾಮಗಾರಿಗಳನ್ನು ಶಾಸಕ ವೇದವ್ಯಾಸ್ ಕಾಮತ್ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಶಾಸಕ ಕಾಮತ್, ಶ್ರೀ ಯು.ಎಸ್ ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ವಿವಿಧ ಕ್ರೀಡಾಪಟುಗಳು ಅಭ್ಯಾಸ ನಿರತರಾಗಿದ್ದಾರೆ. ಬ್ಯಾಡ್ಮಿಂಟನ್,ಕಬಡ್ಡಿ ಹಾಗೂ ಬಾಸ್ಕೆಟ್ ಬಾಲ್ ಕೀಡಾಪಟುಗಳು ಈ ಒಳ ಕ್ರೀಡಾಂಗಣದಲ್ಲಿ ತಮ್ಮ ಕ್ರೀಡಾ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಕಳೆದ ವರ್ಷ ಇಲ್ಲಿನ ಕ್ರೀಡಾಳುಗಳು ನನ್ನನ್ನು ಭೇಟಿ ಮಾಡಿ ಇಲ್ಲಿನ ಸಮಸ್ಯೆಯ ಬಗ್ಗೆ ಮನವಿ ಮಾಡಿಕೊಂಡಿದ್ದರು. ಹಾಗಾಗಿ ಇಲ್ಲಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ಅವರಿಗೆ ಅಭಿವೃದ್ಧಿಪಡಿಸುವ ಕುರಿತು ಭರವಸೆ ನೀಡಿದ್ದೆ ಎಂದರು.
ಕಳೆದ ಬಾರಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಒಳಾಂಗಣದ ಮೇಲ್ಛಾವಣಿಯ ಹಾಳಾಗಿ ಮಳೆನೀರು ಕ್ರೀಡಾಂಗಣದೊಳಗೆ ಬೀಳುತ್ತಿತ್ತು. ಮಳೆನೀರು ಬೀಳುವುದರಿಂದ ಕ್ರೀಡಾಂಗಣದ ನೆಲಹಾಸುಗಳು ಹಾಳಾಗುವ ಪರಿಸ್ಥಿತಿಯೂ ಇತ್ತು. ಅಲ್ಲದೆ ಅನೇಕ ಕ್ರೀಡಾಳುಗಳು ಜಾರಿ ಬಿದ್ದು ಗಾಯಗಳಾಗಿತ್ತು.
ಈ ಹಿನ್ನಲೆ ಕ್ರಿಡಾಂಗಣದ ಅಭಿವೃದ್ದಿಗ ಒಟ್ಟು 25 ಲಕ್ಷ ಹಣ ಬಿಡುಗಡೆಗೊಳಿಸಲಾಗಿದ್ದು. ಮೇಲ್ಛಾವಣಿ, ಪೈಂಟ್, ವುಡನ್ ಫ್ಲೋರಿಂಗಿಗೆ ಪಾಲಿಶ್ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಯೋಜನೆ ರೂಪಿಸಲಾಗಿತ್ತು. ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಉದ್ಘಾಟಿಸಲಾಗಿದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.
ಈ ಕ್ರೀಡಾಂಗಣದಲ್ಲಿ 500ಕ್ಕೂ ಅಧಿಕ ಕ್ರೀಡಾಳುಗಳು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಕ್ರೀಡಾ ವಿಭಾಗಕ್ಕೆ ಒತ್ತು ನೀಡುವ ಸಲುವಾಗಿ ಕ್ರೀಡಾಂಗಣ, ಮೈದಾನಗಳ ಅಭಿವೃದ್ಧಿ ಕಾರ್ಯಗಳಿಗೆ ರೂಪುರೇಷೆ ಸಿದ್ಧಪಡಿಸಲಾಗಿದೆ. ಈಗಾಗಲೇ ಬಹುಮಹಡಿ ಕ್ರೀಡಾ ಕಟ್ಟಡದ ಯೋಜನೆಯ ಕುರಿತು ಮಾತುಕತೆ ನಡೆಯುತ್ತಿದ್ದು ಅವೆಲ್ಲವೂ ಸಾಕಾರಗೊಂಡರೆ ಮಂಗಳೂರು ನಗರದಲ್ಲಿ ಕ್ರೀಡಾ ಪ್ರತಿಭೆಗಳಿಗೆ ಉತ್ತಮ ವೇದಿಕೆ ಒದಗಬಹುದು ಎಂದು ಶಾಸಕರು ತಿಳಿಸಿದ್ದಾರೆ.