LATEST NEWS
ಟ್ರೈನಿ ಐಎಎಸ್ ಅಧಿಕಾರಿ ಡಾ.ಪೂಜಾ ಖೇಡ್ಕರ್ ನ್ನು ಮನೆಗೆ ಕಳುಹಿಸಿದ ಯುಪಿಎಸ್ ಸಿ

ನವದೆಹಲಿ ಜುಲೈ 31: ನಕಲಿ ದಾಖಲಾತಿಗಳ ಮೂಲಕ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದ ಮಹಾರಾಷ್ಟ್ರ ಕೇಡರ್‌ನ 2022ನೇ ಬ್ಯಾಚ್‌ನ ವಿವಾದಿತ ಪ್ರೊಬೇಷನರಿ ಐಎಎಸ್ ಅಧಿಕಾರಿ ಡಾ.ಪೂಜಾ ಖೇಡ್ಕರ್ ಅವರ ಆಯ್ಕೆಯನ್ನು ಯುಪಿಎಸ್ ಸಿ ರದ್ದುಗೊಳಿಸಿದೆ. ಇದರ ಬೆನ್ನಲ್ಲೇ ಇದೀಗ ಅವರು ಬಂಧನದ ಭೀತಿ ಎದುರಿಸುತ್ತಿದ್ದು, ಅವರು ದೆಹಲಿ ಸೆಷನ್ಸ್ ನ್ಯಾಯಾಲಯದಲ್ಲಿ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ಕುರಿತ ಆದೇಶ ನಾಳೆ ಹೊರಬೀಳಲಿದೆ.
ಡಾ.ಪೂಜಾ ಖೇಡ್ಕರ್ ಅವರ ಆಯ್ಕೆಯನ್ನು ಕೇಂದ್ರ ಲೋಕಸೇವಾ ಆಯೋಗ ಇಂದು ಅನೂರ್ಜಿತಗೊಳಿಸಿದೆ. ಅಲ್ಲದೇ ಪೂಜಾ ಅವರಿಗೆ ಆಯೋಗ ನಡೆಸುವ ಯಾವುದೇ ಪರೀಕ್ಷೆಗಳಿಗೆ ಹಾಜರಾಗಲು ಅವಕಾಶ ಇಲ್ಲ ಎಂದು ಹೇಳಿದೆ. ಮಹಾರಾಷ್ಟ್ರದಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಪೂಜಾ ಅವರನ್ನು ಅಂಗವೈಕಲ್ಯ ಹಾಗೂ ಒಬಿಸಿ ಕೋಟಾ ದುರುಪಯೋಗದ ಆರೋಪದ ಮೇಲೆ ವರ್ಗಾವಣೆ ಮಾಡಲಾಗಿತ್ತು.

ಈ ಕುರಿತು ಪೂಜಾ ಖೇಡ್ಕರ್ ವಿರುದ್ಧ ಕೇಂದ್ರ ಲೋಕಸೇವಾ ಆಯೋಗ ಪ್ರಕರಣ ದಾಖಲಿಸಿ ನಾಗರಿಕ ಸೇವಾ ಪರೀಕ್ಷೆ 2022ರ ನಿಯಮಗಳ ಅಡಿ ತನಿಖೆ ನಡೆಸಿತ್ತು. ತನಿಖೆಯಲ್ಲಿ ಅವರ ಮೇಲಿನ ಆರೋಪಗಳು ಸಾಬೀತಾಗಿರುವುದರಿಂದ ಅವರನ್ನು ಅನೂರ್ಜಿತಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ. ಯುಪಿಎಸ್‌ಸಿಯ ಈ ಕ್ರಮದಿಂದ ಐಎಎಸ್ ಅಧಿಕಾರಿ ಪೂಜಾ ಇದೀಗ ಕೆಲಸ ಕಳೆದುಕೊಂಡು ಮುಖಭಂಗ ಅನುಭವಿಸಿದಂತಾಗಿದೆ.
‘ಪೂಜಾ ಅವರು ದುಷ್ಕೃತ್ಯದ ಮೂಲಕ ತಮಗೆ ಅನುಮತಿಸಿದ್ದ ಮಿತಿಯನ್ನು ಮೀರಿ ಹಲವು ಪ್ರಯತ್ನಗಳನ್ನು ಪಡೆದಿರುವುದು ತನಿಖೆಯಿಂದ ಗೊತ್ತಾಗಿದೆ. ಹೀಗಾಗಿ ಇವರ ನೇಮಕಾತಿಯನ್ನೇ ರದ್ದುಗೊಳಿಸುವಂತ ಗಂಭೀರ ಕ್ರಮ ಕೈಗೊಳ್ಳಲು ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ’ ಎಂದು ಆಯೋಗ ಜುಲೈ 19ರಂದು ತಿಳಿಸಿತ್ತು.