Connect with us

    DAKSHINA KANNADA

    ಉಪ್ಪಿನಂಗಡಿಯಲ್ಲೊಬ್ಬ ನದಿ ನುಂಗಣ್ಣ…!!

    ಪುತ್ತೂರು, ಜುಲೈ.28 :ಮೀಸೆ ಹೊಕ್ಕರೆ ಸಾಕು, ಬಳಿಕ ಇಡೀ ದೇಹವನ್ನೇ ನುಗ್ಗಿಸುವ ಸಾಮಥ್ಯ ಇರುವ ಜಿರಳೆಯಂತೆ ತನ್ನ ಸಣ್ಣ ಜಮೀನಿನ್ನೇ ಬಳಸಿಕೊಂಡು ಇಡೀ ನದಿಯನ್ನೇ ಅತಿಕ್ರಮಿಸಿರುವ ವಿದ್ಯಮಾನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ತನ್ನ ಖಾಸಗಿ ಜಮೀನಿನಲ್ಲಿ ಕಟ್ಟಡವೊಂದನ್ನು ಕಟ್ಟಿದ್ದು, ಕಟ್ಟಡಕ್ಕೆ ಜಮೀನು ಕೊರತೆಯಾದ ಹಿನ್ನೆಲೆಯಲ್ಲಿ ಪಕ್ಕದಲ್ಲೇ ಹರಿಯುತ್ತಿರುವ ನೇತ್ರಾವತಿ ನದಿಯ ಒಡಲಿಗೇ ಕಲ್ಲು ಮಣ್ಣು ಸುರಿದು ಕಟ್ಟಡವನ್ನು ವಿಸ್ತರಿಸಿದ್ದ ಅಂಶ ಬೆಳಕಿಗೆ ಬಂದಿದೆ.

    ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಪಕ್ಕದಲ್ಲೇ ಇರುವ ಈ ಕಟ್ಟಡವನ್ನು ಮುಂಭಾಗದಿಂದ ಕಂಡರೆ ನೆಲದಲ್ಲೂ, ಹಿಂಬದಿ ನೋಡಿದಲ್ಲಿ ನೀರಿನಲ್ಲೂ ಇದೆ. ಈ ಕಟ್ಟಡದ ಮಾಲಿಕ ತನ್ನ ಕಟ್ಟಡವನ್ನು ವಿಸ್ತರಿಸಲು ಪಕ್ಕದಲ್ಲೇ ಹರಿಯುತ್ತಿರುವ ನೇತ್ರಾವತಿ ನದಿಯನ್ನೇ ನುಂಗಿದ್ದಾನೆ. ನದಿ ನೀರಿನಿಂದ ಕಟ್ಟಡಕ್ಕೆ ಹಾನಿಯಾಗದಿರಲಿ ಎನ್ನುವ ಕಾರಣಕ್ಕೆ ನದಿಯಿಂದ ಕಟ್ಟಡದ ತಳಪಾಯದವರೆಗೂ ಕಾಂಕ್ರೀಟ್ ತಡೆಗೋಡೆಯನ್ನೂ ನಿರ್ಮಿಸಿಕೊಂಡಿದ್ದಾನೆ. ಆದರೆ ಈತ ನಿರ್ಮಿಸಿಕೊಂಡ ತಡೆಗೋಡೆಯೀಗ ಒಂದು ಕಡೆಯಿಂದ ಜರಿದು ಬಿದ್ದಿದ್ದು, ಇನ್ನೊಂದು ಕಡೆಗೂ ಇದೇ ಪರಿಸ್ಥಿತಿಯಾಗಲಿದೆ.

    ಆದರೆ ಇಲ್ಲಿರುವ ಪ್ರಶ್ನೆ ಒರ್ವ ವ್ಯಕ್ತಿ ರಾಜಾರೋಷವಾಗಿ ನದಿಯ ಸ್ಥಳವನ್ನು ಆಕ್ರಮಿಸಿಕೊಂಡು ಕಟ್ಟಡ ಕಟ್ಟಿದ್ದರೂ, ಇದರ ವಿರುದ್ದ ಯಾವೊಬ್ಬ ಅಧಿಕಾರಿಯಾಗಲೀ, ಸ್ಥಳೀಯ ಗ್ರಾಮಪಂಚಾಯತ್ ಆಗಲೀ ತುಟಿಕ್ ಪಿಟಿಕ್ ಅಂದಿಲ್ಲ. ಕಟ್ಟಡದ ತಳಪಾಯ ಹಾಕುವಾಗಲೇ ಸ್ಥಳೀಯ ಉಪ್ಪಿನಂಗಡಿ ಗ್ರಾಮಪಂಚಾಯತ್ ಈ ಕಟ್ಟಡ ಅಕ್ರಮ ಎಂದು ಪರಿಗಣಿಸಿ ಸಂಬಂಧಪಟ್ಟ ಕಟ್ಟಡದ ಮಾಲಿಕನಿಗೆ ನೋಟೀಸ್ ನೀಡುವುದಾಗಿ ಹೇಳಿಕೊಂಡಿದ್ದರೂ, ಕಟ್ಟಡವೀಗ ಉದ್ಘಾಟನೆಗೊಂಡು ವ್ಯವಹಾರ ಆರಂಭಿಸಿದ್ದರೂ, ಕಟ್ಟಡದಿಂದ ಕೂಗಳತೆಯ ದೂರದಲ್ಲಿರುವ ಗ್ರಾಮಪಂಚಾಯತ್ ನಿಂದ ಇಂದಿನವರೆಗೂ ನೋಟೀಸ್ ರವಾನೆಯಾಗಿಲ್ಲ.

    ತನ್ನ ಪ್ರಭಾವವನ್ನು ಬಳಸಿಕೊಂಡು ಈ ಕಟ್ಟಡದ ಮಾಲಿಕ ತಾನು ಹೇಳಿದ್ದೇ ಕಾನೂನು ಎನ್ನುವ ರೀತಿಯಲ್ಲಿಯಾಡುತ್ತಿದ್ದಾನೆ. ತನ್ನ ಹೆಸರಿನಲ್ಲಿರುವ ಕೊಂಚ ಜಮೀನಿಗೆ , ನದಿಗೆ ಸೇರಿದ ಸಾಕಷ್ಟು ಜಮೀನನ್ನು ಸೇರಿಸಿಕೊಂಡಿರುವ ಈ ವ್ಯಕ್ತಿಯ ವಿರುದ್ಧ ಹಲವು ದೂರುಗಳು ದಾಖಲಾಗಿದ್ದರೂ, ದೂರಾಗಿಯೇ ಮುದುಡಿಹೋಗುತ್ತಿದೆ.ತನ್ನ ಪ್ರಭಾವವನ್ನು ಬಳಸಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈಗಳಿಂದಲೇ ಕಟ್ಟಡವನ್ನು ಉದ್ಘಾಟಿಸಿರುವ ಕಟ್ಟಡದ ಮಾಲಿಕ ಅಧಿಕಾರಿ ವರ್ಗ ತನ್ನ ಅಕ್ರಮಕ್ಕೆ ತಡೆಯಾಗದಂತೆ ನೋಡಿಕೊಂಡಿದ್ದಾನೆ. ಅಲ್ಲದೆ ಇದೀಗ ಸರಕಾರಿ ಸೌಮ್ಯದ ಬಸ್ ಗಳು ಕೂಡಾ ಇದೇ ಅಕ್ರಮ ಕಟ್ಟಡದಲ್ಲಿ ನಡೆಯುತ್ತಿರುವ ಹೋಟೆಲ್ ನಲ್ಲಿ ನಿಲ್ಲುತ್ತಿದ್ದು, ನೆಲದಡಿಯಿರುವ ನೇತ್ರಾವತಿ ನದಿ ನೀರು ಕೊರೆದು ಜರಿದು ಬೀಳುವ ಸಾಧ್ಯತೆಯಿರುವ ಈ ಕಟ್ಟಡದಲ್ಲಿ ಬಸ್ ಗಳನ್ನು ನಿಲ್ಲಿಸುವುದು ಕೂಡಾ ಅಪಾಯಕ್ಕೆ ಎಡೆಮಾಡಿಕೊಡುವ ಸಾಧ್ಯತೆಗಳೂ ಹೆಚ್ಚಾಗಿದೆ. ಮನೆ ಕಟ್ಟಲೆಂದು ನದಿ ಪಾತ್ರದಿಂದ ಗೋಣಿ ಚೀಲದಲ್ಲಿ ಮರಳು ಎತ್ತುವ ಬಡಪಾಯಿಗಳನ್ನು ಹಿಡಿದ ಜೈಲಿಗಟ್ಟುವ ಅಧಿಕಾರಿ ವರ್ಗ , ಈ ಕಟ್ಟಡದ ಮಾಲಿಕ ಇಡೀ ನದಿಯನ್ನೇ ನುಂಗಿ ಹಾಕುತ್ತಿರುವಾಗಲೂ ಕೈ ಕಟ್ಟಿ ಕುಳಿತಿರುವುದು ಹಲವು ಸಂಶಯಗಳಿಗೂ ಎಡೆಮಾಡಿಕೊಟ್ಟಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *