LATEST NEWS
ದಕ್ಷಿಣಕನ್ನಡ ಜಿಲ್ಲೆಯ ಅತ್ಯಧಿಕ ಗಾಂಜಾ ಸಾಗಾಟ ಪ್ರಕರಣದ ಪ್ರಮುಖ ಆರೋಪಿ ಬಂಧನ
ದಕ್ಷಿಣಕನ್ನಡ ಜಿಲ್ಲೆಯ ಅತ್ಯಧಿಕ ಗಾಂಜಾ ಸಾಗಾಟ ಪ್ರಕರಣದ ಪ್ರಮುಖ ಆರೋಪಿ ಬಂಧನ
ಉಪ್ಪಿನಂಗಡಿ ಜುಲೈ 19: ಕಳೆದ ಡಿಸೆಂಬರ್ ನಲ್ಲಿ ಪತ್ತೆಯಾದ 81 ಕೆಜಿ ಗಾಂಜಾ ಸಾಗಾಟ ಪ್ರಕರಣ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಉಪ್ಪಿನಂಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಕಾಸರಗೋಡು ಜಿಲ್ಲೆಯ ಉಪ್ಪಳದ ಹಸೈನಾರ್ ಎಂಬವರ ಪುತ್ರ ಮೊಯ್ದೀನ್ ನವಾಝ್ ಅಲಿಯಾಸ್ ನವಾಝ್ (32) ಎಂದು ಗುರುತಿಸಲಾಗಿದ್ದು, ಇನ್ನೊಬ್ಬ ಆರೋಪಿ ಉಪ್ಪಳ ನಿವಾಸಿ ಬಾತಿಷಾ ಎಂಬಾತನ ಬಂಧನವಾಗಬೇಕಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
2017ರ ಡಿಸೆಂಬರ್‌ನಲ್ಲಿ ಉಪ್ಪಿನಂಗಡಿ ಪೊಲೀಸರು ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಸಂದರ್ಭ ಮಹಾರಾಷ್ಟ್ರ ನೋಂದಣಿಯ ಹೋಂಡಾ ಸಿಟಿ ಕಾರೊಂದು ಹಾಸನ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದು, ತಪಾಸಣೆಗೆ ಪೊಲೀಸರು ಮುಂದಾಗುತ್ತಿದ್ದಂತೆಯೇ ಕಾರಿನಲ್ಲಿದ್ದ ಇಬ್ಬರು ಆರೋಪಿಗಳು ಕಾರನ್ನು ಬಿಟ್ಟು ಕತ್ತಲಲ್ಲಿ ಕಾಡು ದಾರಿಯಲ್ಲಿ ಪರಾರಿಯಾಗಿದ್ದರು. ಪೊಲೀಸರು ಕಾರನ್ನು ಪರಿಶೀಲಿಸಿದಾಗ ಆರು ಬ್ಯಾಗ್ ಹಾಗೂ ಒಂದು ಪಾಲಿಥೀನ್ ಗೋಣಿಯಲ್ಲಿ ಗಾಂಜಾ ಪತ್ತೆಯಾಗಿತ್ತು.
ಸುಮಾರು ಎರಡು ಕೆಜಿಯ ಪ್ರತ್ಯೇಕ ಕಟ್ಟುಗಳನ್ನು ಮಾಡಿ ಒಟ್ಟು 81 ಕೆಜಿ ಗಾಂಜಾವನ್ನು ಬ್ಯಾಗ್‌ಗಳಲ್ಲಿ ತುಂಬಿಸಿ ಸಾಗಿಸಲಾಗುತ್ತಿತ್ತು. ಗಾಂಜಾ ಸಮೇತ ಕಾರನ್ನು ವಶಕ್ಕೆ ಪಡೆದ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದರು.
ದಕ್ಷಿಣಕನ್ನಡ ಜಿಲ್ಲೆಯಲ್ಲಿಯೇ ಅಧಿಕ ಪ್ರಮಾಣದಲ್ಲಿ ಪತ್ತೆಯಾದ ಗಾಂಜಾ ಸಾಗಾಟ ಪ್ರಕರಣ ಇದಾಗಿದ್ದು, ಆರೋಪಿಗಳು ಅಕ್ರಮವಾಗಿ ಮಾದಕ ವಸ್ತುಗಳನ್ನು ಸಾಗಿಸುವ ಕಸುಬಿನಲ್ಲಿ ತೊಡಗಿಸಿಕೊಂಡಿದ್ದರು. ಬಂಧಿತನಾಗಿರುವ ಮೊಯ್ದೀನ್ ನವಾಝ್ ವಿರುದ್ಧ ಮಂಗಳೂರಿನ ಕೊಣಾಜೆ ಪೊಲೀಸ್ ಠಾಣೆ ಹಾಗೂ ಕೇರಳದ ಕುಂಬ್ಳೆ ಪೊಲೀಸ್ ಠಾಣೆಯಲ್ಲಿ ಗಾಂಜಾ ಸಾಗಾಟ ಬಗ್ಗೆ ಪ್ರಕರಣಗಳಿದೆ.