Connect with us

    KARNATAKA

    ರಾಜ್ಯಕ್ಕಾದ ಅನ್ಯಾಯ ಮರೆಮಾಚಲು ಬಿಜೆಪಿಯಿಂದ ಅನಗತ್ಯ ವಿವಾದ : ಸಂಸದ ಡಿ.ಕೆ.ಸುರೇಶ್ ಕಿಡಿ

    ಬೆಂಗಳೂರು :  ಕರ್ನಾಟಕದ ಅಭಿವೃದ್ಧಿ ವೇಗವನ್ನು ತಡೆಯುವ ಹುನ್ನಾರದಿಂದ ರಾಜ್ಯದಿಂದ ಸಂಗ್ರಹವಾಗುವ ಸಂಪನ್ಮೂಲವನ್ನು ಉತ್ತರ ಭಾರತದ ಹಿಂದಿ ಭಾಷಿಗ ರಾಜ್ಯಗಳಿಗೆ ಹಂಚಿಕೆ ಮಾಡಿ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯ ಮಾಡಲಾಗುತ್ತಿದೆ. ಇದನ್ನು ಮರೆಮಾಚಲು ಬಿಜೆಪಿ ಅನಗತ್ಯ ವಿವಾದವನ್ನು ಸೃಷ್ಟಿಸುತ್ತಿದೆ ಎಂದು ಸಂಸದ ಡಿ.ಕೆ.ಸುರೇಶ್ ಕಿಡಿಕಾರಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಇಡೀ ರಾಷ್ಟ್ರದಲ್ಲೇ ಅತೀ ಹೆಚ್ಚು ತೆರಿಗೆ ಪಾವತಿಸುವಲ್ಲಿ ಎರಡನೇ ರಾಜ್ಯ. ಕೇಂದ್ರದ ಸಂಪನ್ಮೂಲದಲ್ಲಿ ಸಿಂಹಪಾಲು ಕರ್ನಾಟಕದ್ದಾಗಿದೆ. ಕೇಂದ್ರದಿಂದ ರಾಜ್ಯಕ್ಕೆ ಪದೇಪದೇ ಅನ್ಯಾಯವಾಗುತ್ತಲೇ ಇದೆ. ತೆರಿಗೆ ಪಾಲಿನಲ್ಲೂ ಸರಿಯಾದ ಹಂಚಿಕೆಯಾಗುತ್ತಿಲ್ಲ. ಉತ್ತರಭಾರತದ ಹಾಗೂ ಅವರಿಗೆ ಬೇಕಾದ ರಾಜ್ಯಗಳಿಗೆ ಹೆಚ್ಚಿನ ಹಣ ಹಂಚಿಕೆ ಮಾಡುತ್ತಿದ್ದಾರೆ. ಇದರಿಂದ ಬೇಸತ್ತ ಜನ ಒಕ್ಕೂಟ ವ್ಯವಸ್ಥೆಯ ಬಗ್ಗೆ ಅಸಹನೆ ವ್ಯಕ್ತಪಡಿಸುತ್ತಿದ್ದಾರೆ. ಆ ಭಾವನೆಯನ್ನಷ್ಟೇ ನಾನು ಹೇಳಿದ್ದೇನೆ ಎಂದಿದ್ದಾರೆ.

    ನಾನು ಭಾರತೀಯ. ಅದರಲ್ಲೂ ಅಪ್ಪಟ ಕನ್ನಡಿಗ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಕಾಂಗ್ರೆಸ್‍ನಿಂದ ಬೆಳೆದು ಬಂದವನು. ದೇಶಭಕ್ತಿ ಅಥವಾ ದೇಶದ ಐಕ್ಯತೆ ಬಗ್ಗೆ ಬಿಜೆಪಿಯವರಿಂದ ಪಾಠ ಕಲಿತುಕೊಳ್ಳುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.

    ಬಿಜೆಪಿಯವರು ಕೇಂದ್ರ ಬಜೆಟ್‍ನಲ್ಲಿ ರಾಜ್ಯಕ್ಕೆ ಏನು ಕೊಡುಗೆ ನೀಡಲಾಗಿದೆ ಎಂಬುದನ್ನು ಚರ್ಚಿಸಲು ಮುಖವಿಲ್ಲದೆ ನನ್ನ ಹೇಳಿಕೆಯನ್ನು ತಿರುಚಿ ವೈಭವೀಕರಿಸಲಾಗುತ್ತಿದೆ. ಇದರ ಹಿಂದೆ ರಾಜ್ಯಕ್ಕಾಗಿರುವ ಅನ್ಯಾಯದ ವಿರುದ್ಧ ಯಾರೂ ಧ್ವನಿಯೆತ್ತ ಬಾರದು ಎಂಬ ಷಡ್ಯಂತರವಿದೆ.

    ರಾಜ್ಯದಲ್ಲಿ ಭೀಕರ ಪರಿಸ್ಥಿತಿ ಇದೆ. ಅಭಿವೃದ್ಧಿಗೂ ಹಿನ್ನಡೆಯಾಗಿದೆ. ಕೇಂದ್ರ ಸರ್ಕಾರ ರಾಜ್ಯದಿಂದ ಸಂಗ್ರಹಿಸಿದ ಸಂಪನ್ಮೂಲವನ್ನು ಸಮರ್ಥವಾಗಿ ಮರುಹಂಚಿಕೆ ಮಾಡಬೇಕಿತ್ತು. ಅದರ ಬಗ್ಗೆ ಬಿಜೆಪಿ ನಾಯಕರು ಉಸಿರನ್ನೇ ಬಿಡುವುದಿಲ್ಲ ಎಂದು ಆಕ್ಷೇಪಿಸಿದರು.

    ದಕ್ಷಿಣ ಭಾರತದ ಕೇರಳ, ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳು ಆರ್ಥಿಕತೆ ಹಾಗೂ ಜನಸಂಖ್ಯೆ ನಿಯಂತ್ರಣದಲ್ಲಿ ಶಿಸ್ತು ಪಾಲನೆ ಮಾಡಿಕೊಂಡು ಬರುತ್ತಿದೆ. ಉತ್ತರ ಭಾರತದಲ್ಲಿ ಬೇಕಾಬಿಟ್ಟಿಯಾಗಿ ದುರ್ಬಳಕೆಗಳಾಗುತ್ತಿವೆ. ಆದರೆ ದಕ್ಷಿಣ ಭಾರತದಿಂದ ಸಂಗ್ರಹಿಸಿದ ಸಂಪನ್ಮೂಲಗಳನ್ನು ಈ ರಾಜ್ಯಗಳಿಗೆ ಹಂಚಿಕೆ ಮಾಡುವ ಮೂಲಕ ನಿರಂತರವಾಗಿ ದ್ರೋಹವೆಸಗಲಾಗುತ್ತಿದೆ ಎಂದರು.

    ಜನಸಂಖ್ಯೆ ಆಧಾರದ ಮೇಲೆ ಹಣ ಹಂಚಿಕೆ ಮಾಡುವ ವೇಳೆ 16 ನೇ ಹಣಕಾಸು ಆಯೋಗ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಬೇಕು. ಕರ್ನಾಟಕ ನ್ಯಾಯೋಚಿತವಾದ ಪಾಲು ಪಡೆಯಲು ಹೋರಾಟ ಮಾಡಲೇಬೇಕಿದೆ. ಈ ಹಿನ್ನೆಲೆಯಲ್ಲಿ ತಾವು ಹೇಳಿಕೆ ನೀಡಿದ್ದು, ಬಿಜೆಪಿಯವರು ಅದನ್ನು ವಿವಾದ ಮಾಡುವ ಮೂಲಕ ವಿಷಯಾಂತರಿಸುತ್ತಿದ್ದಾರೆ ಎಂದು ದೂರಿದರು.

    ಕಳೆದ ಹತ್ತು ವರ್ಷಗಳಿಂದ ಅಭಿವೃದ್ಧಿ,ಹಣಕಾಸಿನ ಬಳಕೆ ಹಾಗೂ ಆರ್ಥಿಕ ಶಿಸ್ತಿನ ಬಗ್ಗೆ ಕೇಂದ್ರ ಸರ್ಕಾರ ಬಜೆಟ್ ಪೂರ್ವ ಸಮೀಕ್ಷಾ ವರದಿಯನ್ನು ಸಂಸತ್‍ನಲ್ಲಿ ಏಕೆ ಮಂಡಿಸಿಲ್ಲ ಎಂದು ಪ್ರಶ್ನೆ ಮಾಡಿದ ಅವರು, ಇಂತಹ ಲೋಪಗಳನ್ನು ಮರೆಮಾಚುವ ಸಲುವಾಗಿಯೇ ಬಿಜೆಪಿ ಅನಗತ್ಯ ವಿವಾದಗಳನ್ನು ಕೆಣಕುತ್ತಿದೆ ಎಂದು ಹೇಳಿದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *