LATEST NEWS
ಅಯೋಧ್ಯೆಯಲ್ಲಿ ರಾಮಮಂದಿರವಾಗುವರೆಗೆ ಅಚ್ಛೇ ದಿನ್ ಬರಲ್ಲ-ಸೋಹನ್ ಸಿಂಗ್ ಸೋಲಂಕಿ

ಅಯೋಧ್ಯೆಯಲ್ಲಿ ರಾಮಮಂದಿರವಾಗುವರೆಗೆ ಅಚ್ಛೇ ದಿನ್ ಬರಲ್ಲ-ಸೋಹನ್ ಸಿಂಗ್ ಸೋಲಂಕಿ
ಮಂಗಳೂರು ನವೆಂಬರ್ 25: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವರೆಗೆ ದೇಶಕ್ಕೆ ಅಚ್ಚೇ ದಿನ್ ಬರುವುದಿಲ್ಲ ಎಂದು ಬಜರಂಗದಳ ರಾಷ್ಟ್ರೀಯ ಸಂಚಾಲಕ ಸೋಹನ್ ಸಿಂಗ್ ಸೋಲಂಕಿ ತಿಳಿಸಿದ್ದಾರೆ.
ಇಂದು ಅಯೋಧ್ಯೆಯಲ್ಲಿ ರಾಮಮಂದಿರಕ್ಕಾಗಿ ಒತ್ತಾಯಿಸುವ ಸಲುವಾಗಿ ಮಂಗಳೂರಿನಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಆಯೋಜಿಸಿದ್ದ ಜನಾಗ್ರಹ ಸಭೆಯಲ್ಲಿ ಅವರು ಮಾತನಾಡಿದರು.
ಮಂಗಳೂರಿನ ಕೇಂದ್ರ ಮೈದಾನದಲ್ಲಿ ಸುಮಾರು 50 ಸಾವಿರಕ್ಕೂ ಕಾರ್ಯಕರ್ತರು ಸೇರಿದ ಬೃಹತ್ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಸೋಹನ್ ಸಿಂಗ್ ಸೋಲಂಕಿ ಬಾಬರಿ ಮಸೀದಿ ಹೆಸರಿನಲ್ಲಿ ಎದೆ ಒಡೆದುಕೊಳ್ಳುವವರ ಕೆಲಸ ಇನ್ನು ನಡೆಯಲ್ಲ. ಪೇಜಾವರ ಶ್ರೀಗಳ ಕೈಗಳಿಂದಲೇ ರಾಮಮಂದಿರದ ಪ್ರಾಣ ಪ್ರತಿಷ್ಠೆ ನಡೆಯಲಿದೆ.ರಾಮನ ಅಸ್ಥಿತ್ವ ಪ್ರಶ್ನಿಸಿದವರನ್ನು ಇಂದು ಕೋಟಿಗಟ್ಟಲೆ ಹಿಂದೂಗಳು ರಸ್ತೆಯಲ್ಲಿ ತಂದು ನಿಲ್ಲಿಸಿದ್ದಾರೆ.

ರಾಮಮಂದಿರವನ್ನು ವಿರೋಧಿಸುತ್ತಿದ್ದವರು ಇವತ್ತು ನಾವೂ ಹಿಂದು ಅನ್ನುತ್ತಿದ್ದಾರೆ. ಬಾಬರ್ ಹೆಸರಿನಲ್ಲಿ ಎದೆ ಒಡೆದುಕೊಳ್ಳೋರು ಹೇಳಲಿ ಬಾಬರ್ ಮತ್ತು ಅವರಿಗೆ ಏನು ಸಂಬಂಧ ? ಹಿಂದೂಗಳನ್ನು ಭಯೋತ್ಪಾದಕರು ಅನ್ನುತ್ತಾರೆ. ಆದರೆ ನಾವೇನಾದರೂ ಭಯೋತ್ಪಾದಕರು ಆಗಿದ್ದರೆ ಜಗತ್ತಿನಲ್ಲಿ ಯಾರೂ ಉಳಿತಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಒಂದು ಕೆನ್ನೆಗೆ ಬಡಿದರೆ ಇನ್ನೊಂದು ಕೆನ್ನೆ ತೋರಿಸಿ ಅನ್ನೋ ಕಾಲವಿತ್ತು ಆದರೆ, ಇಂದು ಹೊಡೆಯಲು ಬಂದರೆ ಕೈ ಮುರಿದು ಮತ್ತೊಂದು ಕೈಗೆ ನೀಡಲು ಗೊತ್ತು. ಕರ್ನಾಟಕ ರಾಜ್ಯದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಮಾಡಲಾಗುತ್ತಿದೆ.
ಹಿಂದೂಗಳ ದೇವಾಲಯ, ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ ಟಿಪ್ಪು ಸುಲ್ತಾನ್ ಜಯಂತಿ ಮಾಡಲಾಗುತ್ತಿದೆ. ಜಯಂತಿ ಮಾಡುವುದಾದರೆ ಹರಿಹರ ಬುಕ್ಕ, ಕೃಷ್ಣರಾಜ ಒಡೆಯರ್ ಜಯಂತಿ ಮಾಡಿ.ಈ ದೇಶ ಬಾಬರ್, ಅಕ್ಬರ್‌ದಲ್ಲ, ಸುಪ್ರೀಂಕೋರ್ಟ್‌ಗೆ ರಾಮಮಂದಿರ ಬಗ್ಗೆ ವಿಚಾರಣೆ ಸಮಯ ಇಲ್ವಂತೆ.
ಶಬರಿಮಲೆ, ಕರುಣಾನಿಧಿ, ದೀಪಾವಳಿ ಪಟಾಕಿ ನಿಷೇಧಕ್ಕೆ ಸಮಯವಿದೆಯೇ?. ಚಳಿಗಾಲದ ಅಧಿವೇಶನದಲ್ಲಿ ರಾಮಮಂದಿರಕ್ಕಾಗಿ ನಿರ್ಣಯ ಕೈಗೊಳ್ಳಲಿ. ಪ್ರಸ್ತುತವಿರುವ ಕೇಂದ್ರ ಸರಕಾರ ಮತ್ತೆ ಅಧಿಕಾರಕ್ಕೆ ಬರಬೇಕೆಂದರೆ ರಾಮಮಂದಿರ ನಿರ್ಮಾಣವಾಗಬೇಕು. ಈ ಹಿಂದೆ ಮಂದಿರ ಎಲ್ಲಿ ಆಗಬೇಕೆಂದು ನಿರ್ಣಯ ಮಾಡಿದ್ವೋ ಅಲ್ಲಿ ನಿರ್ಮಾಣವಾಗಲಿದೆ ಎಂದು ಹೇಳಿದರು.
ಸಭೆಯಲ್ಲಿ ಆಶೀರ್ವಚನ ನೀಡಿದ ಪೇಜಾವರ ವಿಶ್ವೇಶ ತೀರ್ಥರು ಅಯೋಧ್ಯೆಯಲ್ಲಿ ರಾಮಮಂದಿರ ವಾಗಬೇಕೆನ್ನುವುದು ಎಲ್ಲಾ ಸಂತರ ಏಕಾಭಿಪ್ರಾಯವಾಗಿದೆ. ನಾವು ಏನು ಬೇಕಾದರೂ ತ್ಯಾಗ ಮಾಡಬಹುದು, ಆದರೆ ಸ್ವಾಭಿಮಾನವನ್ನಲ್ಲ. ಇದಕ್ಕಾಗಿಯೇ ಸೀತೆಗಾಗಿ ರಾವಣನ ವಿರುದ್ಧ ರಾಮ ಹೋರಾಟ ಮಾಡಿದ. ಪ್ರಧಾನ ಮಂತ್ರಿಗಳು ಜನಾಭಿಪ್ರಾಯಕ್ಕೆ ಮನ್ನಣೆ ನೀಡಬೇಕಾಗಿದೆ.
ಪ್ರಧಾನಮಂತ್ರಿಗಳು ಸುಗ್ರೀವಾಜ್ಞೆ ಹೊರಡಿಸಿ ಅಥವಾ ಸಂಯುಕ್ತ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಿ. ರಾಮ ಮಂದಿರ ನಿರ್ಮಾಣದ ಬಗ್ಗೆ ಯಾವುದೇ ರಾಜಿ ಇಲ್ಲ. ರಾಮ ಮಂದಿರ ನಿರ್ಮಾಣ ಈ ಬಾರಿ ಘೋಷಣೆಯಾಗುತ್ತದೆ ಎಂದು ಹೇಳಿದ್ದೆ.
ಚುನಾವಣೆ ಮುನ್ನ ರಾಮಮಂದಿರದ ಬಗ್ಗೆ ನಿರ್ಧಾರವಾಗುತ್ತೆ. ಕೇಂದ್ರ ಸರಕಾರಕ್ಕೆ ಧೈರ್ಯ ತುಂಬುವ ಮೂಲಕ ಸರಕಾರಕ್ಕೆ ಒತ್ತಾಯ ಮಾಡುವ ಹೋರಾಟವಿದು. ಮಂದಿರ ನಿರ್ಮಾಣಕ್ಕೆ ನಿರ್ಧಾರವಾಗದಿದ್ದರೆ ಸಂಸದರು, ಬಿಜೆಪಿ ಮುಖಂಡರು ರಾಜೀನಾಮೆ ನೀಡಲು ಸಿದ್ಧರಾಗಬೇಕು ಎಂದು ಕರೆ ನೀಡಿದರು.
ಸಮಾವೇಶದಲ್ಲಿ ಸಂಸತ್ ಅಧಿವೇಶದಲ್ಲಿ ಮಂದಿರ ನಿರ್ಮಾಣ ಮಾಡಲು ಮಸೂದೆ ತರಲು ಒತ್ತಾಯಿಸಿ ಸಂಸದ ನಳಿನ್ ಕುಮಾರ್ ಕಟೀಲ್ ಗೆ ವಿ ಎಚ್ ಪಿ ಯಿಂದ ಮನವಿ ಸಲ್ಲಿಸಲಾಯಿತು.
ಜನಾಗ್ರಹ ಸಭೆಗೂ ಮುನ್ನ ನಗರದ ಜ್ಯೋತಿ ವೃತ್ತದಿಂದ ಸಮಾವೇಶ ನಡೆಯುವ ಕೆಂದ್ರ ಮೈದಾನಿನ ವರೆಗೆ ಬೃಹತ್ ಹಕ್ಕೊತ್ತಾಯ ಜಾಥಾ ಆಯೋಜಿಸಲಾಗಿತ್ತು. ಒಡಿಯೂರು ಮಠದ ಗುರುದೇವಾನಂದ ಸ್ವಾಮೀಜಿ, ಗುರುಪುರ ಮಠದ ರಾಜಶೇಖರಾನಂದ ಸ್ವಾಮೀಜಿ, ಮುಕ್ತಾನಂದ ಸ್ವಾಮೀಜಿ, ಆರ್ ಎಸ್ ಎಸ್ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರುಗಳಾದ ಉಮನಾಥ್ ಕೋಟ್ಯಾನ್, ವೇದವ್ಯಾಸ್ ಕಾಮತ್, ರಾಜೇಶ್ ನಾಯಕ್, ಹರೀಶ್ ಪೂಂಜಾ, ಡಾ. ಭರತ್ ಶೆಟ್ಟಿ ಸಹಿತ ಮತ್ತಿತರ ಗಣ್ಯರು ಜಾಥಾದಲ್ಲಿ ಪಾಲ್ಗೊಂಡಿದ್ದರು.