ಅಂಬರೀಶ್ ಸಾವಿನ ಬಗ್ಗೆ ಮೊದಲೇ ಜ್ಯೋತಿಷ್ಯ ನುಡಿದಿದ್ದ ಜ್ಯೋತಿಷಿ‌ ಪ್ರಕಾಶ್ ಅಮ್ಮಣ್ಣಾಯ

ಉಡುಪಿ ನವೆಂಬರ್ 26: ಉಡುಪಿಯ ಕಾಪುವಿನ ಖ್ಯಾತ ಜ್ಯೋತಿಷಿ‌ ಪ್ರಕಾಶ್ ಅಮ್ಮಣ್ಣಾಯ, ನಟ ಅಂಬರೀಶ್ ಸಾವಿಗೂ ಮುಂಚೆಯೇ ಅವರಿಗೆ ಗಂಡಾತರವಿರುವ ಬಗ್ಗೆ ತಿಳಿಸಿದ್ದೆ ಅಲ್ಲದೆ ನಟ ಅಂಬರೀಶ್ ಗೆ ಮೃತ್ಯುಂಜಯ ಹೋಮ ನಡೆಸಲು ಸೂಚನೆ ನೀಡಿದ್ದೆ ಎಂದು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ಅವರ ಪೇಸ್ ಬುಕ್ ನಲ್ಲಿ ಈ ಬಗ್ಗೆ ಬರೆದಿರುವ ಅವರು ದೊಡ್ಡಣ್ಣ ಅವರ ಮೂಲಕ ‌ನನಗೆ ಅಂಬರೀಶ್ ಅವರ ಪರಿಚಯ ಆಯ್ತು. ಅವರ ಜಾತಕ ನೋಡಿ ,ಲಗ್ನಾಷ್ಟಮದಲ್ಲಿ ಶನಿಸಂಚಾರ ಕಾಲ,ದಶಾಧಿಪತಿ ಬುಧನಿಗೆ ಚತುರ್ಥದಲ್ಲಿ ಕೇತು ಇರುವುದು ಅಪಾಯ ಎಂದು ತಿಳಿದು ಅವರಿಗೆ ಮೃತ್ಯುಂಜಯ ಹೋಮ ಮತ್ತು ಆಶ್ಲೇಷಾಬಲಿ ಮಾಡಲು ಸೂಚಿಸಿದ್ದೆ.

ಆ ಪ್ರಕಾರ ಹನ್ನೆರಡನೆಯ ತಾರೀಕು ನನ್ನ ಮೂಲಕವೇ ಮಾಡುವುದೆಂದೂ ದಿನ ನಿಗದಿಯೂ ಆಯ್ತು. ಆದರೆ ಆ ದಿನ ಬೆಂಗಳೂರಲ್ಲಿ ನನಗೆ ಜ್ವರ ಬಂದು ಆರೋಗ್ಯವೂ ಕೈ ಕೊಟ್ಟಿತು.ಆದರೂ ಮಾಡೇ ಬಿಡೋಣ ಅಂತ ನನ್ನ ಜತೆ ಬಂದಿದ್ದ ಪುರೋಹಿತರು ಹೇಳಿಯೂ ಇದ್ದರು.ಆದರೆ ಮಾನ್ಯ ಅನಂತಕುಮಾರ್ ಅವರ ಅಂತ್ಯಕ್ರಿಯೆಯ ಕಾರಣ ಮುಂದಿನ ಸಲ ಮಾಡೋಣ ಎಂದು ಅಂಬರೀಷ್ ಹೇಳಿದರು.ನಾನೂ ಸುಮ್ಮನಾದೆ.

ಈ ನಂತರ ಯಾವಾಗ ಮಾಡೋಣ ಎಂದು ಮತ್ತೆ ಕೇಳಿದ್ದರು.ನಾನು ಇನ್ನೂ date ಕೊಡದೆ ಮುಂದೆ ಹಾಕಿದ್ದೆ. ಈಗ ನಮ್ಮ ನೆಚ್ಚಿನ ಅಂಬರೀಷ್ ಇನ್ನಿಲ್ಲ. ಇದನ್ನೇ ದೈವ ಚಿತ್ತ ಎನ್ನುವುದು.ನಾನೇನೂ ಜೀವ ಉಳಿಸುವವನಲ್ಲ. ಆದರೆ ಭಕ್ತಿಶ್ರದ್ಧೆಯಿಂದ ಮಾಡುವ ಆ ಹೋಮ ಪೂಜೆಗಳಿಗೆ ಆ ಶಕ್ತಿ ಇತ್ತು ಎಂದು ಬರೆದುಕೊಂಡಿದ್ದಾರೆ.ಈ ಪೋಸ್ಟ್ ಈಗ ಸಾಮಾಜಿಕ‌ ಜಾಲತಾಣದಲ್ಲಿ‌ ಸಾಕಷ್ಟು ಸದ್ದು‌ಮಾಡುತ್ತಿದೆ.

ಅನಾರೋಗ್ಯದ ಕಾರಣ ಅಂಬರೀಶ್ ದಿನಾಂಕ 24ರಂದು ರಾತ್ರಿ ವಿಧಿವಶರಾಗಿದ್ದಾರೆ. ಇಂದು ಮಧ್ಯಾಹ್ನದ ನಂತರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಿಂದ ಮೆರವಣಿಗೆಯ ಮೂಲಕ ಕಂಠೀರವ ಸ್ಟುಡಿಯೋಗೆ ತಂದು ಪಾರ್ಥಿವ ಶರೀರರದ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ.

Facebook Comments

comments