LATEST NEWS
ಮಹಿಳೆಯರಿಗೆ ರಕ್ಷಾಬಂಧನ ಗಿಫ್ಟ್ – ಗೃಹ ಬಳಕೆ ಸಿಲಿಂಡರ್ ಮೇಲೆ 200 ರೂಪಾಯಿ ಸಬ್ಸಿಡಿ
ನವದೆಹಲಿ ಅಗಸ್ಟ್ 29: ಲೋಕಸಭಾ ಚುನಾವಣೆ ಹಾಗೂ ಪಂಚ ರಾಜ್ಯಗಳ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆ ಇದೀಗ ಕೇಂದ್ರ ಸರಕಾರ ದೇಶದ ಜನರಿಗೆ ಸಿಹಿ ಸುದ್ದಿ ನೀಡಿದ್ದು. 14 ಕೆಜಿ ಎಲ್ಪಿಜಿ ಮೇಲೆ 200 ರೂಪಾಯಿ ಸಬ್ಸಿಡಿ ನೀಡುವುದಾಗಿ ಘೋಷಿಸಿದೆ.
ಮಂಗಳವಾರ ಕೇಂದ್ರ ಕ್ಯಾಬಿನೆಟ್ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಸಬ್ಸಿಡಿ ಹಣ ನೇರವಾಗಿ ಗ್ರಾಹಕರ ಖಾತೆಗೆ ವರ್ಗಾವಣೆಯಾಗುವುದಿಲ್ಲ. ಬದಲಾಗಿ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್, ಹಿಂದೂಸ್ತಾನ ಪೆಟ್ರೋಲಿಯಂ ಕಾರ್ಪೋರೇಷನ್ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಕಂಪನಿಗಳಿಗೆ ಸಬ್ಸಿಡಿ ಹಣ ಸಿಗಲಿದೆ. ಪ್ರಸ್ತುತ ಬೆಂಗಳೂರಿನಲ್ಲಿ 14 ಕೆಜಿ ಎಲ್‌ಪಿಜಿಗೆ 1100 ರೂ. ಇದೆ. ಇನ್ನು ಮುಂದೆ 900 ರೂ.ಗೆ ಗ್ಯಾಸ್ ಸಿಲಿಂಡರ್ ಸಿಗಲಿದೆ.
ಕಚ್ಚಾ ತೈಲ ಬೆಲೆ ಏರಿಕೆಯಾದ ಬೆನ್ನಲ್ಲೇ ತೈಲ ಕಂಪನಿಗಳು ಮೇ, ಜುಲೈನಲ್ಲಿ ಎಲ್‌ಪಿಜಿ ಸಿಲಿಂಡರ್ ದರವನ್ನು ಏರಿಸಿದ್ದವು. ರಾಜಸ್ಥಾನ, ಛತ್ತೀಸ್‌ಗಢ, ಮಧ್ಯಪ್ರದೇಶ, ತೆಲಂಗಾಣ, ಮಿಜೋರಾಂನಲ್ಲಿ ಚುನಾವಣೆ ಘೋಷಣೆಗೂ ಮುನ್ನವೇ ಕೇಂದ್ರದಿಂದ ಈ ಮಹತ್ವದ ನಿರ್ಧಾರ ಪ್ರಕಟವಾಗಿದೆ.
ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ: ಪ್ರಧಾನಿಗೆ ಕಟೀಲ್ ಅಭಿನಂದನೆ
ರಕ್ಷಾ ಬಂಧನ ಹಾಗೂ ಓಣಂ ಹಬ್ಬದ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಅಡುಗೆ ಅನಿಲ ಗ್ರಾಹಕರಿಗೆ ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಮೇಲೆ ರೂ. 200 ಹಾಗೂ ಉಜ್ವಲ ಯೋಜನೆಯ ಗ್ಯಾಸ್ ಸಿಲಿಂಡರ್ ಗಳಿಗೆ ರೂ. 400 ಸಬ್ಸಿಡಿಯನ್ನು ತೈಲ ಕಂಪೆನಿಗಳಿಗೆ ನೇರವಾಗಿ ನೀಡುವ ಮೂಲಕ ದೇಶವಾಸಿಗಳಿಗೆ ಭರ್ಜರಿ ಗಿಫ್ಟ್ ನೀಡಿದೆ.
ಸುಮಾರು 33 ಕೋಟಿ ಗ್ರಾಹಕರು ಇದರ ಪ್ರಯೋಜನವನ್ನು ಪಡೆಯಲಿದ್ದಾರೆ.
ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ ಮಾಡುವ ಮಹತ್ವದ ನಿರ್ಧಾರ ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿಜಿಯವರ ನೇತೃತ್ವದ ಕೇಂದ್ರ ಸರ್ಕಾರವನ್ನು ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಇವರು ಅಭಿನಂದಿಸಿದ್ದಾರೆ.