Connect with us

    LATEST NEWS

    50 ಕೋಟಿ ಸಿರಿಂಜ್‌ಗಳನ್ನು ಸಂಗ್ರಹಿಸಲು ಮುಂದಾದ ಯುನಿಸೆಫ್‌…!?

    ವಿಶ್ವಸಂಸ್ಥೆ: ಕೋವಿಡ್‌-19 ಗೆ ಲಸಿಕೆ ಲಭ್ಯವಾಗುವುದಕ್ಕಿಂತ ಮೊದಲೇ, ಈ ವರ್ಷಾಂತ್ಯಕ್ಕೆ 50 ಕೋಟಿ ಸಿರಿಂಜ್‌ಗಳನ್ನು ಸಂಗ್ರಹಿಸಲು ಯುನಿಸೆಫ್‌ ಮುಂದಾಗಿದೆ.

    2021ರ ವೇಳೆಗೆ 100 ಕೋಟಿ ಸಿರಿಂಜ್‌ಗಳು ಸಂಗ್ರಹಿಸಲು ಯುನಿಸೆಫ್‌ ನಿರ್ಧರಿಸಿದೆ. ಒಂದೊಮ್ಮೆ ಲಸಿಕೆ ಲಭ್ಯವಾಗುತ್ತಿದ್ದಂತೆ, ಜನರಿಗೆ ಲಸಿಕೆ ನೀಡಲು ಅನುಕೂಲವಾಗಬೇಕು ಎಂಬ ಉದ್ದೇಶದಿಂದ ಸಂಸ್ಥೆ ಇಂಥ ಕ್ರಮಕ್ಕೆ ಮುಂದಾಗಿದೆ ಎಂದು ಮೂಲಗಳು ಹೇಳಿವೆ.

    ‘ಕೋವಿಡ್‌-19 ಲಸಿಕೆ ಲಭ್ಯತೆಗಾಗಿ ಇಡೀ ವಿಶ್ವವೇ ಎದುರು ನೋಡುತ್ತಿದೆ. ಲಸಿಕೆ ಲಭ್ಯವಾಗುತ್ತಿದ್ದಂತೆಯೇ ಅದರ ವ್ಯಾಪಕ ಬಳಕೆಗೆ ಹಿನ್ನಡೆಯಾಗಬಾರದು. ಹೀಗಾಗಿ ಸಿರಿಂಜ್‌ಗಳನ್ನು ಸುರಕ್ಷಿತವಾಗಿ, ತ್ವರಿತವಾಗಿ ಎಲ್ಲ ದೇಶಗಳಿಗೆ ತಲುಪಿಸಲು ಬೇಕಾದ ಸಿದ್ಧತೆಗಳಿಗೆ ಸಂಸ್ಥೆ ಚಾಲನೆ ನೀಡಿದೆ’ ಎಂದು ಯುನಿಸೆಫ್‌ ಹೇಳಿದೆ.
    ‘ವಿಶ್ವದ ಎಲ್ಲ ಜನರಿಗೆ ಕೋವಿಡ್‌-19 ವಿರುದ್ಧದ ಲಸಿಕೆ ನೀಡುವುದು ಮಾನವ ಕುಲದ ಇತಿಹಾಸದಲ್ಲಿಯೇ ಬೃಹತ್‌ ಸಾಮೂಹಿಕ ಲಸಿಕೆ ಕಾರ್ಯಕ್ರಮವಾಗಲಿದೆ. ಹೀಗಾಗಿ, ಈ ಮಾರಕ ಸೋಂಕಿಗೆ ಲಸಿಕೆ ಲಭ್ಯವಾಗುತ್ತಿದ್ದಂತೆಯೇ ಸಮರೋಪಾದಿಯಲ್ಲಿ ಲಸಿಕೆ ಕಾರ್ಯಕ್ರಮ ಆರಂಭಿಸಬೇಕಾಗುತ್ತದೆ’ ಎಂದು ಯುನಿಸೆಫ್‌ನ ನಿರ್ದೇಶಕಿ ಹೆನ್ರಿಟಾ ಫೋರ್‌ ಹೇಳಿದರು.

    ‘ಲಸಿಕೆ ಕಾರ್ಯಕ್ರಮಕ್ಕೆ ಬಳಸುವ ಸಿರಿಂಜ್‌ಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಬೇಕು. ಬಳಸಿದ ಸಿರಿಂಜ್‌ಗಳಿಂದ ಉಂಟಾಗಬಹುದಾದ ಗಾಯ, ರಕ್ತದ ಮೂಲಕ ಕಾಯಿಲೆ ಪ್ರಸರಣವಾಗುವ ಅಪಾಯವನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಹೀಗಾಗಿ ಸಿರಿಂಜ್‌ಗಳ ವಿಲೇವಾರಿಗಾಗಿ 50 ಲಕ್ಷ ಸುರಕ್ಷತಾ ಬಾಕ್ಸ್‌ಗಳನ್ನು ಸಹ ಖರೀದಿ ಮಾಡಲಾಗುತ್ತದೆ’ ಎಂದು ಫೋರ್‌ ಹೇಳಿದರು.

    Share Information
    Advertisement
    Click to comment

    You must be logged in to post a comment Login

    Leave a Reply