LATEST NEWS
ತಂದೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಪೆರೋಲ್ ನಲ್ಲಿ ಉಡುಪಿಗೆ ಆಗಮಿಸಿದ ಭೂಗತ ಪಾತಕಿ ಬನ್ನಂಜೆ ರಾಜ

ಉಡುಪಿ, ಮೇ 4: ಬೆಳಗಾವಿ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಭೂಗತ ಜಗತ್ತಿನ ವ್ಯಕ್ತಿ ಬನ್ನಂಜೆ ರಾಜಾ ಅವರಿಗೆ ಅವರ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಹೈಕೋರ್ಟ್ ತುರ್ತು ಪೆರೋಲ್ ನೀಡಿದೆ. ಬೆಳಗಾವಿ ಜೈಲಿನಲ್ಲಿರುವ ಭೂಗತ ಪಾತಕಿ ಬನ್ನಂಜೆ ರಾಜನನ್ನು ಪೊಲೀಸರು ರವಿವಾರ ಪೆರೋಲ್‌ನಲ್ಲಿ ಉಡುಪಿಗೆ ಕರೆತಂದಿದ್ದಾರೆ.
ಎಪ್ರಿಲ್ 27 ರಂದು ಬನ್ನಂಜೆ ರಾಜ ಅವರ ತಂದೆ ಎಂ.ಸುಂದರ್(88) ನಿಧನರಾಗಿದ್ದರು. ಅವರ ಅಂತ್ಯಕ್ರಿಯೆ ಹಾಗೂ ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ತುರ್ತು ಪೆರೋಲ್ ನೀಡುವಂತೆ ಬನ್ನಂಜೆ ರಾಜ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದನು. ಈ ಅರ್ಜಿಯನ್ನು ಮಾನ್ಯ ಮಾಡಿದ ಹೈಕೋರ್ಟ್ ಬನ್ನಂಜೆ ರಾಜನವಿಗೆ ಷರತ್ತು ಬದ್ದ ಪೆರೋಲ್ ನೀಡಿದೆ. ಮೇ 3ರಿಂದ ಮೇ 14ರವರೆಗೆ ಪೆರೋಲ್ ನೀಡಿದೆ.

ಪೊಲೀಸರು ಆತನನ್ನು ಇಂದು ಬಿಗಿ ಪೊಲೀಸ್ ಭದ್ರತೆಯಲ್ಲಿ ಮಲ್ಪೆ ಕಲ್ಮಾಡಿಯ ಸಸಿತೋಟ ಎಂಬಲ್ಲಿರುವ ಆತನ ಮನೆಗೆ ಕರೆದುಕೊಂಡು ಬಂದಿದ್ದು, ಅಲ್ಲಿ ಆತ ತಂದೆಯ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿ ದನು. ಬಳಿಕ ಮಲ್ಪೆ ಹಿಂದೂ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು.
‘ತಂದೆಯ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡ ಬಳಿಕ ಬನ್ನಂಜೆ ರಾಜ ಮನೆಯಿಂದ ಹೊರಗೆ ಬರಬಾರದು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಲಾಗಿದೆ. ಇದೇ 14ರಂದು ಆತನನ್ನು ಮತ್ತೆ ಬೆಳಗಾವಿಯ ಜೈಲಿಗೆ ಕರೆದೊಯ್ಯಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ.ತಿಳಿಸಿದ್ದಾರೆ.